ನಂತೂರು ಭಾರತೀ ಸಮೂಹ ಸಂಸ್ಥೆ : ಶಿಕ್ಷಕರ ದಿನಾಚರಣೆ, ದೇಸೀ ಹಾಲು ವಿತರಣೆ
ಮಂಗಳೂರು ಸೆ.5 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳಲ್ಲಿ ಬುಧವಾರ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಭಾರತೀ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೀ ಗುರುಪೂಜೆ ನೆರವೇರಿತು. ಕೇಶವ ಭಟ್ ದಿವಾಣ ಅವರು ಮಾತನಾಡಿದರು.
ಶ್ರೀ ಭಾರತೀ ಪದವಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್ ಉದ್ಘಾಟಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪ್ರಾಮಾಣಿಕತೆ, ಧೈರ್ಯ, ವಿಶಾಲ ಹೃದಯ ಅವರನ್ನು ಎತ್ತರಕ್ಕೇರಿಸಿದೆ. ಅಂತಹ ಮಹಾನುಭಾವರ ದಾರಿಯಲ್ಲಿ ನಡೆಯುವ, ಅವರ ಆಶಯಗಳನ್ನು ಮುಂದುವರಿಸುವ ಕಾರ್ಯವಾಗಬೇಕಾಗಿದೆ. ಈ ದೃಷ್ಟಿಯಲ್ಲಿ ಇಂದು ಶಿಕ್ಷಕರು ತಮ್ಮನ್ನು ತಾವು ಅವಲೋಕನ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭ ವಿದ್ಯಾರ್ಥಿಗಳು ಎಲ್ಲ ಉಪನ್ಯಾಸಕರನ್ನು ಗೌರವಿಸಿದರು. ಶ್ವೇತಾ ಸ್ವಾಗತಿಸಿದರು. ಶ್ರೇಯಾ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ವಂದಿಸಿದರು.
ಪಪೂ ಕಾಲೇಜು ಪ್ರಾಂಶುಪಾಲೆ ವಿದ್ಯಾ ಭಟ್, ಹಿರಿಯ ಉಪನ್ಯಾಸಕಿ ಸುಭದ್ರಾ ಮೇಡಮ್, ಸಂಯೋಜಕಿ ಗಂಗಾರತ್ನ ಮುಗುಳಿ, ಸಂಯೋಜಕ ಅನಂತನಾರಾಯಣ ಪದಕಣ್ಣಾಯ ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ಶಂಕರಶ್ರೀ ಸಭಾಭವನದಲ್ಲಿ ಪಪೂ ವಿದ್ಯಾರ್ಥಿಗಳಿಂದ ಟ್ಯಾಲೆಂಟ್ಸ್ ಡೇ ನಡೆಯಿತು.
ದೇಸೀ ಹಾಲು ವಿತರಣೆ :
ಇದೇ ಸಂದರ್ಭ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶಯ ಹಾಗೂ ಆದೇಶದಂತೆ ಶ್ರೀ ಮಠದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಭಾರತೀಯ ಗೋವಿನ ಹಾಲನ್ನು ನೀಡಬೇಕೆಂದು ತಿಳಿಸಿದಂತೆ ಶಿಕ್ಷಕರ ದಿನಾಚರಣೆಯ ಸಂದರ್ಭ ಎಲ್ಲರಿಗೂ ಭಾರತೀಯ ಗೋವುಗಳ ಹಾಲನ್ನು ನೀಡಲಾಯಿತು.