ವಿದ್ಯಾರ್ಥಿ ಸಂಘ ಉದ್ಘಾಟನೆ 2018-19
ಮನಸ್ಸಿನ ಕಲ್ಮಶಗಳನ್ನು ಕಿತ್ತೆಸೆಯಬೇಕು : ಡಾ.ಶ್ರೀಧರ ಭಟ್
ಮಂಗಳೂರು ಜು.14 : ಮಕ್ಕಳು ಕನಸು ಕಾಣಬೇಕು. ಕನಸು ಕಾಣದೇ ಇದ್ದರೆ ಭವಿಷ್ಯವಿಲ್ಲ. ಭವಿಷ್ಯದ ಕನಸು ಕಾಣುವುದೇ ನಿಜವಾಗುವ ಕನಸು. ಸವಾಲುಗಳನ್ನು ಎದುರಿಸಬೇಕು. ಮನಸ್ಸಿನ ಕಲ್ಮಶಗಳನ್ನು ಕಿತ್ತೆಸೆಯಬೇಕು. ಸ್ವಚ್ಛ ಹಾಗೂ ಸಾಽಸುವ ಛಲವನ್ನು ಹೊಂದಿದಾಗ ಯಶಸ್ಸು ನಿಶ್ಚಿತ. ಈ ಸಂಸ್ಥೆಯ ಆಡಳಿತ ಸಮಿತಿ ಹಾಗೂ ಬೋಧಕ ವೃಂದಕ್ಕೆ ಕನಸಿದೆ. ಇಲ್ಲಿ ಆದರ್ಶ ಇದೆ. ಕಲ್ಪನೆ ಇದೆ. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ಪ್ರೇರಕ ಶಕ್ತಿಯಿದೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಶ್ರೀಧರ ಭಟ್ ಹೇಳಿದರು.
ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಪದವಿ, ಪದವಿಪೂರ್ವ ಹಾಗೂ ಪ್ರೌಢಶಾಲೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ, ಮಾತನಾಡಿದರು.
ಭಾರತೀ ಸಮೂಹ ಸಂಸ್ಥೆಯಲ್ಲಿ ಅಪೂರ್ವ ವಾತಾವರಣ ಸೃಷ್ಟಿಯಾಗಿದೆ. ಇದೊಂದು ಕೂಡು ಕುಟುಂಬದಂತಿದೆ. ಇಲ್ಲಿ ಕಾರ್ಖಾನೆಯ ವಾತಾವರಣವಿಲ್ಲ. ಮಾನವೀಯ ಗುಣಗಳನ್ನು ನೀಡುವ, ಭವಿಷ್ಯದ ಗುರಿಯನ್ನು ಸಾಧಿಸುವ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಮನೋಭಾವವಿದೆ. ಆದರೆ ವಿದ್ಯಾರ್ಥಿಗಳ ಸಾಧನೆ ನಿಂತ ನೀರಾಗದೇ ನಿರಂತರವಾಗಿರಲಿ. ಪ್ರತಿಯೊಬ್ಬರಿಗೂ ಅವರದೇ ಆದ ಪ್ರಾಮುಖ್ಯತೆ ಇದೆ. ವಕ್ರದಾರಿಯನ್ನು ಬಳಸದೆ, ನೇರದಾರಿಯಲ್ಲೇ ಸಾಗಬೇಕು ಎಂದು ಅವರು ಹಿತವಚನ ನೀಡಿದರು.
ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ವಿದ್ಯಾವಂತರೇ ಉಗ್ರರಾಗುತ್ತಿರುವುದು ದುರಂತ. ಭಾರತೀಯ ಸಂಸ್ಕೃತಿಯ ವಿದ್ಯಾಭ್ಯಾಸ ಪಡೆದಾಗ ಸದ್ಗುಣ ಸಂಪನ್ನನಾಗಲು ಸಾಧ್ಯ. ವಿದ್ಯಾರ್ಥಿ ಸಂಘದ ನಾಯಕರು ಸಂಸ್ಥೆಯ ಹಿತದೃಷ್ಟಿಗಾಗಿ, ಉತ್ತಮ ಧ್ಯೇಯೋದ್ದೇಶಗಳನ್ನು ಪರಸ್ಪರ ಹಂಚಿಕೊಳ್ಳುವ ಸಲುವಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಆಡಳಿತ ವ್ಯವಸ್ಥೆಗೆ ತಲುಪಿಸಬೇಕು ಎಂದು ಹೇಳಿದರು.
ಎಸ್ಎಸ್ಎಸ್ ವಿದ್ಯಾಲಯದ ಮುಖ್ಯೋಪಾಧ್ಯಾಯ ಗುರುರಾಜ ಭಟ್ ಅವರು ಭಾಗವಹಿಸಿ, ಮಾತನಾಡಿ, ಭಾರತೀಯ ಸಂಸ್ಕೃತಿಯ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯು ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇದು ಭವಿಷ್ಯವನ್ನು ಭದ್ರವಾಗಿಸುವ ದಾರಿಯಲ್ಲಿ ಮಹತ್ವದ ಸಾಧನೆಯಾಗಲಿದೆ ಎಂದರು.
ಸಂಸ್ಥೆಯ ಆಡಳಿತಾಽಕಾರಿ ಪ್ರೊ.ಕೆ.ಶಂಕರ ಭಟ್, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್ ಶುಭಹಾರೈಸಿದರು. ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ವಿದ್ಯಾರ್ಥಿ ಸಂಘದ ಪದಾಽಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಗಂಗಾರತ್ನ ಮುಗುಳಿ ಮತ್ತು ಜ್ಯೋತಿ ಸಂಘದ ಪದಾಧಿಕಾರಿಗಳನ್ನು ಪರಿಚಯಿಸಿದರು. ಸುಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎ.ಈಶ್ವರಪ್ರಸಾದ್ ಅವರು ಪ್ರಸ್ತಾವಿಸಿದರು. ವಿದ್ಯಾರ್ಥಿಗಳಾದ ಧನುಷ್ ಸ್ವಾಗತಿಸಿ, ಪ್ರಿಯಾಂಕ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.
ಪದವಿ ಕಾಲೇಜು :
ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜಾಹ್ನವಿ, ಉಪಾಧ್ಯಕ್ಷರಾಗಿ ಅರ್ಚನಾ, ಕಾರ್ಯದರ್ಶಿಯಾಗಿ ಕಾವ್ಯಶ್ರೀ, ಜತೆಕಾರ್ಯದರ್ಶಿಯಾಗಿ ಸುಪ್ರೀತ್ ಅವರನ್ನು ಆಯ್ಕೆ ಮಾಡಲಾಯಿತು.
ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ :
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರಶಾಂತ್, ಉಪಾಧ್ಯಕ್ಷರಾಗಿ ವೈಷ್ಣವಿ ಶೆಣೈ, ವಿವಿಧ ಪದಾಧಿಕಾರಿಗಳಾಗಿ ಶಿವಪ್ರಸಾದ್, ಸ್ವಪ್ನಾ, ನಿಶಾನ್, ಶ್ರೀಲಕ್ಷ್ಮೀ ಭಟ್, ನವ್ಯಾ, ಸಾಕ್ಷಿ, ನಾಗಾಭರಣ, ಲತೀಶ್,ಚಿದಾನಂದ ಹೆಗ್ಡೆ, ಕಾರ್ತಿಕ್ ಹಾಗೂ ಪ್ರೌಢಶಾಲೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮನೀಶ್, ಉಪಾಧ್ಯಕ್ಷರಾಗಿ ನೇಹಾ, ವಿವಿಧ ಪದಾಧಿಕಾರಿಗಳಾಗಿ ಪಲ್ಲವಿ, ಚರಣ್ ಅವರನ್ನು ಆಯ್ಕೆ ಮಾಡಲಾಯಿತು.