ನಂತೂರು ಭಾರತೀ ಪದವಿ ಕಾಲೇಜು : ವಿದ್ಯಾರ್ಥಿಗಳಿಗೆ ಸ್ವಾಗತ
ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ಅನಿವಾರ್ಯ : ಎನ್.ಜಿ.ಮೋಹನ್
ನಂತೂರು, ಜೂ.25 : ಅಂಕಗಳೇ ಶಿಕ್ಷಣವಲ್ಲ, ಕಡಿಮೆ ಅಂಕ ಗಳಿಸಿದವರಿಗೂ, ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ಅನಿವಾರ್ಯ. ಅಂತವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು. ಶ್ರೀ ಭಾರತೀ ಸಮೂಹ ಸಂಸ್ಥೆ ಈ ನಿಟ್ಟಿನಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದೆ. ಇದು ಸಮಗ್ರ ವಿದ್ಯಾಲಯವಾಗಿ ರೂಪುಗೊಳ್ಳಬೇಕು ಎಂದು ದ.ಕ.ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಚೀಫ್ ಕಮಿಷನರ್ ಎನ್.ಜಿ.ಮೋಹನ್ ಹೇಳಿದರು.
ಅವರು ಸೋಮವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆಡಳಿತದಲ್ಲಿರುವ ಶ್ರೀ ಭಾರತೀ ಪದವಿ ಕಾಲೇಜಿನ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
ಶ್ರೀರಾಮಚಂದ್ರಾಪುರ ಮಠದ ವಿದ್ಯಾ ವಿಭಾಗದ ಶ್ರೀ ಕಾರ್ಯದರ್ಶಿ ಪ್ರಮೋದ ಪಂಡಿತ ಅವರು ಉದ್ಘಾಟಿಸಿ, ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸಮಿತಿಗೆ ಎಲ್ಲರೂ ಕೈಗೂಡಿದಾಗ ಯಶಸ್ಸು ಸಾಧ್ಯ. ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳಲ್ಲದೇ ಹೆತ್ತವರೂ ಕೈಜೋಡಿಸಬೇಕು. ವೈಫಲ್ಯ ಮತ್ತು ಯಶಸ್ಸುಗಳ ನಡುವೆ ಕಲಿಕೆಯ ಲಾಭವಿದೆ. ಎರಡನ್ನೂ ಅನುಭವವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ವಿದ್ಯಾರ್ಜನೆಯನ್ನು ಪಡೆಯಬೇಕು ಎಂಬ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಕಲ್ಪನೆಯಂತೆ ಇಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತದೆ. ಸಂಸ್ಥೆಯು ಹಲವರ ಸಹಕಾರದಲ್ಲಿ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಯಶಸ್ಸು ಗಳಿಸಿದಾಗ ಕಾಲೇಜಿಗೂ ಕೀರ್ತಿ ಬರುತ್ತದೆ ಎಂದರು.
ಶೈಕ್ಷಣಿಕ ಸಮಿತಿ ಸಂಯೋಜಕ, ಸೇವಾ ಸಮಿತಿ ಸಹಕಾರ್ಯದರ್ಶಿ ಪ್ರೊ.ವಿ.ಜಿ.ಭಟ್ ಅವರು ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ವಿಶೇಷ ತರಬೇತಿ ನೀಡಿದರು.
ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಡಾ.ರಾಜೇಂದ್ರಪ್ರಸಾದ್, ಆಡಳಿತಾಧಿಕಾರಿ ಪ್ರೊ.ಶಂಕರ ಭಟ್, ಪಪೂ ಕಾಲೇಜು ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಉಪನ್ಯಾಸಕಿ ಗಂಗಾರತ್ನ ಮುಗುಳಿ, ಗ್ರಂಥಪಾಲಕಿ ಜಯಂತಿ, ಕ್ಲರ್ಕ್ ವಿದ್ಯಾ ಮತ್ತು ಸಿಬಂದಿ ಸತೀಶ್ ಶಾಸ್ತ್ರಿ ಅವರನ್ನು ಗೌರವಿಸಲಾಯಿತು.
ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಸ್ವಾಗತಿಸಿದರು. ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ.ಅವರು ಮಾಹಿತಿ ನೀಡಿದರು. ಉಪನ್ಯಾಸಕಿ ಗಂಗಾರತ್ನ ಮುಗುಳಿ ಕಾರ್ಯಕ್ರಮ ನಿರ್ವಹಿಸಿದರು. ಕೋರ್ ಕಮಿಟಿ ಸದಸ್ಯ ಪ್ರೊ.ಟಿ.ಶ್ರೀಕೃಷ್ಣ ಭಟ್ ಸುಳ್ಯ ವಂದಿಸಿದರು.