*ಭವ್ಯ ಭಾರತದ ಬೆಳವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಧಾನಪತ್ರ ವಹಿಸಿದ್ದರು : ಮಹೇಶ್ ನಾಯಕ್*
ನಂತೂರು, ನ.27 : ಭಾರತದ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದ ಸ್ಪಷ್ಟ ಕಲ್ಪನೆಯನ್ನು ತುಂಬಿ ಭವ್ಯ ಭಾರತದ ಬೆಳವಣಿಗೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಧಾನಪತ್ರ ವಹಿಸಿದ್ದರು ಎಂದು ಸಾಹಿತಿ ಕಲ್ಲಚ್ಚು ಪ್ರಕಾಶನದ ಮಹೇಶ ಆರ್ ನಾಯಕ್ ಹೇಳಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಪದವಿ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ‘ಅಂಬೇಡ್ಕರ್ ಓದು ‘ನಾಮಾಂಕಿತದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಸಿಎಫ್, ಪವರ್ ಮತ್ತು ಇನ್ಸ್ಟ್ರುಮೆಂಟ್ಸ್ ವಿಭಾಗದ ನಿವೃತ್ತ ಜಾಯಿಂಟ್ ಜನರಲ್ ಮೆನೇಜರ್ ಶ್ರೀ ಉಮೇಶ್ ಭಟ್ ಕೆ. ವಿ. ಯವರು ಅಂಬೇಡ್ಕರ್ ಜೀವನ ಯಾನದ ಬಗ್ಗೆ ಬೆಳಕು ಚೆಲ್ಲಿದರು.
ಭಾಷಣ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಶಾಂತ್ಕೃಷ್ಣ ಗಾಂವ್ಕರ್ ಪ್ರಥಮ, ವೇದಪ್ರಕಾಶ್ ದ್ವಿತೀಯ, ಚೈತ್ರಾ ಎಚ್.ಅಮೀನ್ ತೃತೀಯ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪದವಿಪೂರ್ವ ಕಾಲೇಜಿನ ದೀಕ್ಷಾ ಪ್ರಥಮ, ಸುದೀಕ್ಷಾ ದ್ವಿತೀಯ ಮತ್ತು ನವೀನ್ಚಂದ್ರ ತೃತೀಯ ಬಹುಮಾನ ಪಡೆದರು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಲಲಿತವಾಗಿ ನಡೆಯಲು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಶ್ರೀ ಭಾರತೀ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷತ್ ರಾಜ್ ಮತ್ತು ಗುರುಕಿರಣ್ ಅವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಪ್ರಸ್ತಾವನೆಗೈದರು. ಉಪನ್ಯಾಸಕಿಯರಾದ ಶ್ರೀಮತಿ ಜ್ಯೋತಿ ನಾಗರಾಜ್ ಸ್ವಾಗತಿಸಿ, ಶ್ರೀಮತಿ ಶ್ವೇತಾ ವಂದಿಸಿದರು. ಉಪನ್ಯಾಸಕರಾದ ಶ್ರೀ ಕಾರ್ತಿಕ್ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಐಶ್ವರ್ಯ ಮತ್ತು ನಿಶಾರಾಣಿ ಅವರು ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ದಿವ್ಯಾ ಮತ್ತು ಐಶ್ವರ್ಯ ಅತಿಥಿಗಳನ್ನು ಪರಿಚಯಿಸಿದರು.