ಮಂಗಳೂರು ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶೇಷ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಪದವೀಧರ ಸಹಾಯಕ ಶಿಕ್ಷಕ ಶ್ರೀ ಭಾಸ್ಕರ ಹೊಸಮನೆ ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಪಡೆಯಬೇಕು. ಪಠ್ಯದ ಜತೆಗೆ ಸದ್ವಿಚಾರಗಳನ್ನು ಮೈಗೂಡಿಸಿಕೊಂಡಾಗ ಜೀವನ ಯಶಸ್ವಿಯಾಗುತ್ತದೆ. ಗುರುಹಿರಿಯರಿಂದ ಪಡೆದ ಸಂಸ್ಕಾರ, ಸಂಸ್ಕೃತಿ, ಶಿಸ್ತು, ತಾಳ್ಮೆಯ ಮಾರ್ಗದರ್ಶನವು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಕಾವೇರಿ ಇದರ ಅಧ್ಯಕ್ಷರಾದ ಲಯನ್ ನಮಿತಾ ಡಿ.ರಾವ್ ಅವರು ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ವಿತರಿಸಿ, ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾತ್ಮಕ ಚಟುವಟಿಕೆಗಳನ್ನು ಮಾಡಿದಾಗ ಪ್ರೋತ್ಸಾಹಿಸಬೇಕು ಎಂದರು.
ಸ್ವಾಮಿ ಸದಾನಂದ ಸರಸ್ವತಿ ವಿದ್ಯಾಲಯದ ಹಿರಿಯ ಶಿಕ್ಷಕಿ ರಶ್ಮಿ, ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಶ್ರೀ ಭಾರತೀ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷತ್ ರಾಜ್ ಮತ್ತು ಗುರುಕಿರಣ್ ಅವರನ್ನು ಅಭಿನಂದಿಸಲಾಯಿತು. ಅವರನ್ನು ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ಎಸ್. ಪರಿಚಯಿಸಿದರು.
ಪ್ರಾಂಶುಪಾಲರಾದ ಗಂಗಾರತ್ನ ಅವರು ಪ್ರಸ್ತಾವನೆಗೈದರು. ಉಪಪ್ರಾಂಶುಪಾಲೆ ಗಾಯತ್ರಿ ಶೆಣೈ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ವಿದ್ಯಾರ್ಥಿನಿ ಮಲೀಹಾ ಫಾತಿಮಾ ಖಾನ್ ಸ್ವಾಗತಿಸಿ ಲಕ್ಷ್ಮೀ ಡಿ ಎನ್ ವಂದಿಸಿದರು. ಉಪನ್ಯಾಸಕಿ ದಿವ್ಯಾ ರೈ ನಿರೂಪಣೆಗೈದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವು.
ಮನುಸ್ವಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.