ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು: ವಿಶ್ವ ಮಹಿಳಾ ದಿನಾಚರಣೆ
ಮಾರ್ಚ್ 8 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶಂಕರಶ್ರೀ ಸಭಾಂಗಣದಲ್ಲಿ ಶ್ರೀ ಭಾರತೀ ಪದವಿ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹಿರಿಯ ಉಪನ್ಯಾಸಕಿ ಶ್ರೀಮತಿ ಸುಭದ್ರಾ ಭಟ್ ಅವರು, ವೇದಕಾಲದಲ್ಲಿ ಋಷಿಮುನಿಗಳ ಮಧ್ಯೆ ಚರ್ಚೆಗಳು ನಡೆದಾಗ ಅದಕ್ಕೆ ನಿರ್ಣಾಯಕರಾಗಿ ಋಷಿ ಪತ್ನಿಯರು ಭಾಗವಹಿಸುತ್ತಿದ್ದ ಉದಾಹರಣೆಗಳಿಂದಾಗಿ ಮಹಿಳೆಯರಿಗೆ ಹಿಂದೆಯೂ ವಿಶೇಷ ಪ್ರಾಮುಖ್ಯತೆ ಇತ್ತು ಎಂದು ತಿಳಿದು ಬರುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಮಹಾನಗರಪಾಲಿಕೆಯ ಸದಸ್ಯರಾದ ಶ್ರೀಮತಿ ಶಕೀಲಾ ಕಾವ ಅವರು ಫ್ಲೋಟಿಂಗ್ ಕ್ಯಾಂಡಲ್ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ, ಮಹಿಳೆ ಸಂಘಟಿತಳಾಗಿ ಕಾರ್ಯ ನಿರ್ವಹಿಸಿದಾಗ ಅವಳು ಯಾರನ್ನೂ ಅವಲಂಬಿಸಬೇಕಾಗಿಲ್ಲ, ಸ್ವಾವಲಂಬನೆಯ ಬದುಕು ಅವಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಗಂಗಾರತ್ನ ಮುಗುಳಿ, ಪುರುಷ ದೈಹಿಕವಾಗಿ ಸದೃಢನಾಗಿದ್ದರೆ, ಸ್ರ್ರೀ ಮಾನಸಿಕವಾಗಿ ಸಬಲಳಾಗಿದ್ದಾಳೆ. ಸ್ತ್ರಿ-ಪುರುಷರಿಬ್ಬರೂ ಜೊತೆಯಾಗಿ ನಡೆದಾಗ ಮಾತ್ರ ಜೀವನ ಪಯಣ ಸುಗಮವಾಗಿ ಸಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಎಂ.ಟಿ. ಭಟ್ ಅವರು, ಮಹಿಳಾ ದಿನಾಚರಣೆಯು ಮಹಿಳೆಯರ ಸಾಧನೆಯನ್ನು ಗುರುತಿಸಿ ಸಂಭ್ರಮಿಸುವ ಒಂದು ದಿನದ ಆಚರಣೆಯಾಗಿ ಮಾತ್ರ ಉಳಿಯದೆ ನಿರಂತರವಾಗಿ ಅವಳ ಸಾಮರ್ಥ್ಯವನ್ನು ಬೆಳಕಿಗೆ ತರುವ ಪ್ರಯತ್ನಗಳಾಗಬೇಕು ಎಂದರು.
ವಿದ್ಯಾರ್ಥಿನಿ ಅಂಕಿತಾ ನೀರ್ಪಾಜೆ ಸ್ತ್ರೀಯ ಮಹತ್ವದ ಬಗ್ಗೆ ಹಾಗೂ ವಿದ್ಯಾರ್ಥಿ ಪ್ರಶಾಂತ್ ಗಾಂವ್‌ಕರ್ ತನ್ನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿದ ಸ್ತ್ರೀಯರ ಬಗ್ಗೆ ಮಾತನಾಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜೀವನ್‌ದಾಸ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಭಟ್ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ವಿದ್ಯಾರ್ಥಿನಿ ಗಂಗಾ ಸತ್ಯನಾರಾಯಣ ಹೆಗ್ಡೆ ಸ್ವಾಗತಿಸಿ, ದಾಕ್ಷಾಯಿಣಿ ವಂದಿಸಿದರು. ಅಂಕಿತಾ ನೀರ್ಪಾಜೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಿದರು.