ನಂತೂರು ಶ್ರೀ ಭಾರತೀ ಹೈಸ್ಕೂಲ್, ಪಿಯು ಕಾಲೇಜು : ಶಿಕ್ಷಕರಿಗೆ ತರಬೇತಿ

ನಂತೂರು ಶ್ರೀ ಭಾರತೀ ಹೈಸ್ಕೂಲ್, ಪಿಯು ಕಾಲೇಜು : ಶಿಕ್ಷಕರಿಗೆ ತರಬೇತಿ

ವಿದ್ಯಾರ್ಥಿಗಳಲ್ಲಿ ವಿಶ್ವಾಸವನ್ನು ಬೆಳೆಸಬೇಕು. ಅವರಲ್ಲಿ ಭರವಸೆಯನ್ನು ಮೂಡಿಸಬೇಕು. ಅವರ ಪ್ರತಿಭಾ ದರ್ಶನ ಮಾಡಿಸಬೇಕು. ವಿದ್ಯಾರ್ಥಿಗಳಲ್ಲಿ ನಿರಂತರ ಸಂಪರ್ಕ, ಬಾಂಧವ್ಯವನ್ನು ಇರಿಸಿಕೊಳ್ಳಬೇಕು. ಆಗ ಶಿಕ್ಷಕರಿಗೆ ಯಶಸ್ಸು ಕಟ್ಟಿಟ್ಟದ್ದು ಎಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾ ಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಅವರು ತಿಳಿಸಿದರು.

ಅವರು ಸೋಮವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ಏರ್ಪಡಿಸಿದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದರು.

ಉತ್ತಮ ಫಲಿತಾಂಶ ದಾಖಲಿಸುವುದರ ಜತೆಗೆ ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಭಾವನಾತ್ಮಕವಾಗಿ, ಶಾರೀರಿಕವಾಗಿ, ಆರೋಗ್ಯದಾಯಕವಾಗಿರುವಂತೆ ಗಮನಹರಿಸಬೇಕು ಎಂದು ಅವರು ಹೇಳಿದರು.

ಪ್ರಾಂಶುಪಾಲರಾದ ವಿದ್ಯಾ ಭಟ್ ಸ್ವಾಗತಿಸಿದರು. ಶಿಕ್ಷಕಿ ದಿವ್ಯಲತಾ ಶೆಟ್ಟಿ ಮತ್ತು ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ ವಂದಿಸಿದರು.

Highslide for Wordpress Plugin