Faculty Orientation Programme

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ : ವಿಶೇಷ ಕಾರ್ಯಾಗಾರದ ಸಮಾರೋಪ

ಅನ್ವೇಷಣಾಪೂರ್ವಕ ಶಿಕ್ಷಣ ಇಂದಿನ ಅಗತ್ಯ :ನಾಗರಾಜಪ್ಪ

ಮಂಗಳೂರು ಜು.10 : ಗುರುಗಳು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದ ರೂವಾರಿಗಳು. ಅವರು ವಿದ್ಯಾರ್ಥಿಗಳಲ್ಲಿ ವಾಸ್ತವಪ್ರಜ್ಞೆಯನ್ನು ಮೂಡಿಸಿ ಸದ್ಭಾವನೆಗಳನ್ನು ಹುಟ್ಟಿಸಬೇಕು. ಪೂರ್ವ ತಯಾರಿಯಿಲ್ಲದೆ ಶಿಕ್ಷಕರು ತರಗತಿಗೆ ಹೋಗಬಾರದು. ಅನ್ವೇಷಣಾಪೂರ್ವಕ ಶಿಕ್ಷಣ ಇಂದಿನ ಅಗತ್ಯ ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ಹೇಳಿದರು.
ಅವರು ಸೋಮವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಬೋಧಕ ವೃಂದದವರಿಗೆ ಮೂರು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.
ಮೂರು ದಿನಗಳ ಕಾಲ ಶಿಕ್ಷಕರಿಗೆ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಯು.ಎಸ್.ವಿಶ್ವೇಶ್ವರ ಭಟ್ ಅವರು ಮಾತನಾಡಿ, ನೀರು ಹರಿಯುತ್ತಲೇ ಇದ್ದಾಗ ಶುದ್ಧವಾಗಿರುತ್ತದೆ. ಅದೇ ರೀತಿ ಮನಸ್ಸು ಚಿಂತನಶೀಲವಾಗಿದ್ದರೆ ಪರಿಶುದ್ಧವಾಗಿರುತ್ತದೆ. ಜ್ಞಾನ ಸಂಪಾದನೆ ನಿತ್ಯ ನಿರಂತರ ಪ್ರಕ್ರಿಯೆ. ಅದನ್ನು ಒಂದು ಕಡೆಯಿಂದ ಪಡೆದು ಇನ್ನೊಂದೆಡೆಗೆ ವರ್ಗಾಯಿಸುತ್ತಿರಬೇಕು ಎಂದರು.

ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆಡಳಿತಾಽಕಾರಿ ಪ್ರೊ.ಕಿನಿಲ ಶಂಕರ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ಶಿಕ್ಷಕರು ತರಬೇತಿ ಕಾರ್ಯಕ್ರಮದಲ್ಲಿ ಕಲಿತ ವಿಚಾರಗಳನ್ನು ತಮ್ಮ ದೈನಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು ಎಂದರು.
ಸೇವಾ ಸಮಿತಿಯ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಉಪಸ್ಥಿತರಿದ್ದರು. ಉಪನ್ಯಾಸಕರಾದ ದಿವ್ಯಲತಾ, ಪ್ರವೀಣ್, ಕುಸುಮಾವತಿ, ಸ್ವಾತಿ ಮತ್ತು ಸೂರ್ಯನಾರಾಯಣ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್ ಸ್ವಾಗತಿಸಿ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರ ಪ್ರಸಾದ್ ಎ. ಅವರು ವಂದಿಸಿದರು. ವಾಣಿಜ್ಯ ಉಪಾನ್ಯಾಸಕ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು.

 

Highslide for Wordpress Plugin