ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ನಡೆಯಿತು.
ಲಯನ್ಸ್‌ನ ಜಿಲ್ಲಾ ಉಪ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಧ್ವಜಾರೋಹಣಗೈದು, ಮಾತನಾಡಿ, ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ಪರಿಣತರಾಗಿ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ ನಮ್ಮದೇಶಕ್ಕೆ ಹೆಮ್ಮೆಯ ಗರಿಗಳನ್ನು ಮೂಡಿಸಿದ್ದಾರೆ. ಅದೇ ರೀತಿ ನಮ್ಮ ವಿದ್ಯಾರ್ಥಿಗಳು ತಾವು ಅಭಿವೃದ್ಧಿ ಹೊಂದಿ ದೇಶದ ಪ್ರತಿನಿಧಿಗಳಾಗಿ ಹೆಸರು ಗಳಿಸಬೇಕು, ಮಾದಕ ದ್ರವ್ಯ ಮುಕ್ತ ದೇಶ ನಮ್ಮದಾಗುವಂತೆ ಶ್ರಮಿಸಬೇಕು ಎಂದರು.
ಸಂಸ್ಥೆಯ ಸೇವಾಸಮಿತಿಯ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ನೀರಮೂಲೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿ ಹೊಂದುವುದರೊಂದಿಗೆ ಸಂಸ್ಥೆಗೆ – ದೇಶಕ್ಕೆ ಒಳ್ಳೆಯ ಹೆಸರು ತರಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲಯನ್ಸ್ ಕುಡ್ಲದ ಅಧ್ಯಕ್ಷರಾದ Ln.ಪ್ರಮೋದ್ ರೈ ಅವರು ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು ಎನ್ನುತ್ತಾ ಶುಭಹಾರೈಸಿದರು.
ಇನ್ನೊಬ್ಬರು ಮುಖ್ಯ ಅತಿಥಿ ಗಳಾದ Ln. ಚಂದ್ರಹಾಸ ರೈ ಅವರು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳು ಅವರನ್ನು ಕ್ರಿಯಾಶೀಲರನ್ನಾಗಿ ಮಾಡುತ್ತದೆ ಎನ್ನುತ್ತಾ ಆಟಿ (ಆಷಾಢ) ತಿಂಗಳ ಮಹತ್ವವನ್ನು ತಿಳಿಸಿದರು.
ಪ್ರಾಂಶುಪಾಲರಾದ ಗಂಗಾರತ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಮಾರಂಭದಲ್ಲಿ ಆಟಿ(ಆಷಾಢ) ತಿಂಗಳಿನಲ್ಲಿ ಮಾಡುವ ವಿಶೇಷ ಖಾದ್ಯಗಳ ಬಗ್ಗೆ ಪೋಷಕರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಪ.ಪೂ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಬಳಿಕ ವಿದ್ಯಾರ್ಥಿಗಳು ದೇಶಭಕ್ತಿಗೆ ಸಂಬಂಧಿಸಿದ ಗೀತೆ, ಭಾಷಣ ಹಾಗೂ ಸಮೂಹ ನೃತ್ಯಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ನೇತ್ರಾವತಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ನಿರ್ಮಲಾ, ಕುಡ್ಲ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಮಲ್ಲಿಕಾ ಸಂತೋಷ್ ಸ್ವಾಗತಿಸಿ,ಅಕ್ಷತಾ ವಂದಿಸಿದರು.ಸಂಗೀತಾ ನಿರೂಪಣೆ ಗೈದರು.