ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 2-12-23 ರಂದು ಪ್ರಗ್ಯಾನ್ – 2023 ವಿಜ್ಞಾನ ಮೇಳ ಸಂಭ್ರಮದಿಂದ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಯುಜಿ ಸೈನ್ಸ್ ವಿಭಾಗದ ನಿರ್ದೇಶಕ ಡಾ.ನಾರಾಯಣ ಭಟ್ ಮರುವಳ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶವನ್ನು ಉಪಯೋಗಿಸಿಕೊಂಡು ಶಿಕ್ಷಕರ ಮಾರ್ಗದರ್ಶನದೊಂದಿಗೆ ತಮ್ಮ ಪ್ರತಿಭೆಯ ಪ್ರದರ್ಶನ ನೀಡಿದುದು ಪ್ರಶಂಸನೀಯ ಎಂದರು.
ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ಬಿಎಎಸ್ ಎಫ್ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಜಶೇಖರ ಭಟ್ ಕಾಕುಂಜೆ ಅವರು ಮಾತನಾಡಿ ವಿದ್ಯಾರ್ಥಿಗಳು ಶೇಕಡಾ ಇಪ್ಪತ್ತೈದರಷ್ಟು ವಿಚಾರಗಳನ್ನು ಮಾತ್ರ ಕಲಿಕೆಯಿಂದ ಪಡೆಯುತ್ತಾರೆ, ಐವತ್ತರಷ್ಟು ಜ್ಞಾನವನ್ನು ಅವರ ಇತರ ಚಟುವಟಿಕೆಗಳ ಮೂಲಕ, ಉಳಿದ ಇಪ್ಪತ್ತೈದರಷ್ಟು ಅನುಭವಗಳನ್ನು ಸೋಲಿನಿಂದ ಪಡೆಯುತ್ತಾರೆ. ಮತ್ತು ಸೋಲನ್ನು ಗೆಲುವಾಗಿ ಪರಿವರ್ತಿಸುವಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇವಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿ ಎಮ್.ಟಿ.ಭಟ್ ಅವರು ಮಾತನಾಡಿ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ ಅವರನ್ನು ಕ್ರಿಯಾಶೀಲರನ್ನಾಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತವೆ ಎಂದರು.
ಮುಖ್ಯ ಅತಿಥಿಯಾದ ಸೇವಾಸಮಿತಿಯ ಕೋಶಾಧಿಕಾರಿ ಶ್ರೀ ಉದಯಶಂಕರ ನೀರ್ಪಾಜೆ ಅವರು ಮಾತನಾಡುತ್ತಾ ,ಸೇವಾಸಮಿತಿಯು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪ್ರೋತ್ಸಾಹದಾಯಕವಾಗಿದೆ .ಅವರ ಸರ್ವತೋಮುಖ ಅಭಿವೃದ್ಧಿಗೆ ಸದಾ ನಮ್ಮ ಬೆಂಬಲವಿದೆ ಎಂದರು
ಪ್ರಾಂಶುಪಾಲರಾದ ಗಂಗಾರತ್ನ ಪ್ರಸ್ತಾವಿಸಿದರು.
ವಿದ್ಯಾರ್ಥಿನಿಯರಾದ ಮಲೀಹಾ ಫಾತಿಮಾ ಖಾನ್ ಮತ್ತು ಅಮೃತಲಕ್ಷ್ಮೀ ಅತಿಥಿಗಳನ್ನು ಪರಿಚಯಿಸಿದರು.
ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ವೈವಿಧ್ಯಮಯ ವಿಜ್ಞಾನ ಮಾದರಿಗಳು ಎಲ್ಲರ ಮೆಚ್ಚುಗೆ ಗಳಿಸಿದವು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ರಂಗೋಲಿ, ರಸಪ್ರಶ್ನೆ, ಮೆಮೋರಿ ಗೇಮ್ಸ್, ಟ್ರೆಶರ್ ಹಂಟ್ ಸ್ಪರ್ಧೆಗಳನ್ನು ನಡೆಸಲಾಯಿತು.
ವಿದ್ಯಾರ್ಥಿಗಳಾದ ಅಚಿಂತ ಮೋಹನ್.ಎಮ್ ಸ್ವಾಗತಿಸಿ, ಅಭಿನಂದನ್ ವಂದಿಸಿದರು. ವಿದ್ಯಾರ್ಥಿನಿ ಸಾನ್ವಿ ನಿರೂಪಿಸಿದರು.