ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ

 

ನಂತೂರು, ಜೂ.3 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಜುಲೈ 3ರಂದು ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಣ್ಣಗುಡ್ಡೆ ದರ್ಶನ್ ಸ್ವಿಚ್ ಗೇರ್ಸ್ ಪಾಲುದಾರರಾದ ಶ್ರೀ ಬಾಲಸುಬ್ರಹ್ಮಣ್ಯ ಕಬೆಕ್ಕೋಡು ಅವರು ಮಾತನಾಡಿ  ಎಲ್ಲರ ಒಳಗೂ ಒಬ್ಬ ಗುರುವಿದ್ದಾನೆ. ನಾವು ಮುನ್ನಡೆಯುವ ದಾರಿಗೆ ಗುರುವಿನ ಮಾರ್ಗದರ್ಶನವಿರುತ್ತದೆ. ನಮ್ಮ ಸಕಾರಾತ್ಮಕ ಚಿಂತನೆಗಳ ಮೂಲಕ ನಮ್ಮೊಳಗಿನ ಗುರು ನಮಗೆ ದಾರಿತೋರಿಸುತ್ತಾನೆ ಎಂದರು.

ಗುರು ಪೂರ್ಣಿಮೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಶ್ರೀ ಭಾಸ್ಕರ ಹೊಸಮನೆಯವರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಾ, ಶಂಕರಾಚಾರ್ಯರು ಸಮಸ್ತ ಲೋಕಕ್ಕೂ ಆಚಾರ್ಯರು; ಈ ಗುರು ಪರಂಪರೆಯ ಕೃಪಾಶೀರ್ವಾದದೊಂದಿಗೆ ನಾವು ಮುನ್ನಡೆಯಬೇಕು, ಈ ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳ ಪೋಷಕರು ಪುಣ್ಯವಂತರು ವಿದ್ಯಾರ್ಥಿಗಳು ಭಾಗ್ಯವಂತರು ಎಂದರು.

ಈ ಸಂದರ್ಭದಲ್ಲಿ ಶ್ರೀ ಗುರುಗಳ ಕೃಪಾಶೀರ್ವಾದಗಳನ್ನು ಬೇಡುತ್ತಾ ಪುಷ್ಪಾರ್ಚನೆ ಗೈಯಲಾಯಿತು.

ಪ್ರಾಂಶುಪಾಲೆ ಗಂಗಾರತ್ನ ಶುಭ ಹಾರೈಸಿದರು. ಸಂಸ್ಥೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಜರಿದ್ದರು.

ದ್ವಿತೀಯ ಪಿಯುಸಿಯ ಸಾನ್ವಿ ಭಾವಗೀತೆ ಮತ್ತು ಹತ್ತನೇ ತರಗತಿಯ ಜಾನ್ವಿ, ಸಾನ್ವಿ, ಅನನ್ಯಾ, ಶಿವಾನಿ ಸಮೂಹ ಗಾಯನ ಹಾಡಿದರು. ಪಿಯುಸಿಯ ಅಮೃತಲಕ್ಷ್ಮಿ ಗುರುಪೂರ್ಣಿಮೆಯ ಬಗ್ಗೆ ಮಾತನಾಡಿದರು.  ಗಾಯತ್ರಿ ಶೆಣೈ ಮತ್ತು ಕಾರ್ತಿಕ್‌ಕೃಷ್ಣ ಅತಿಥಿಗಳನ್ನು ಪರಿಚಯಿಸಿದರು.

ಉಪನ್ಯಾಸಕಿ ಶೋಭಾ ಸಂತೋಷ್  ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್‌ಕುಮಾರ್ ವಂದಿಸಿದರು. ಶಿಕ್ಷಕಿ ಗಾಯತ್ರಿ ಶ್ರೀನಿವಾಸ್  ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin