ಮಂಗಳೂರಿನ ಶ್ರೀ ಭಾರತೀ ಕಾಲೇಜಿನಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಚ್ಛತಾ ಅಭಿಯಾನದ ಶಪಥ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರಪ್ರಸಾದ್ ಅವರು ಸೇವಾಮನೋಭಾವದೊಂದಿಗೆ ಸ್ವಚ್ಛತೆಯ ಅರಿವು ವಿದ್ಯಾರ್ಥಿಗಳ ಅಚ್ಚುಕಟ್ಟಾದ ಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು. ನಂತರ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಗಂಗಾರತ್ನ ಮುಗುಳಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಸ್ವಚ್ಛತೆಗಾಗಿ ನಾವು ತೆಗೆದುಕೊಳ್ಳುವ ಪ್ರತಿಯೊಂದು ಶ್ರಮವು ದೇಶವನ್ನು ನಿರ್ಮಲವಾಗಿಸುತ್ತದೆ ಎನ್ನುವ ವಿಚಾರವನ್ನು ನಾವು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿಟ್ಟೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್. ಎನ್. ಭಟ್ ಮಾತನಾಡುತ್ತಾ, ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸ್ವಚ್ಛತೆಯ ಕಡೆಗೆ ಗಮನ ಕೊಡುವುದರೊಂದಿಗೆ, ಸಾರ್ವಜನಿಕರಲ್ಲೂ ಸ್ವಚ್ಛತೆಯ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು ಎಂದರು. ಕು. ಶ್ರೇಯಾ ಸ್ವಾಗತಿಸಿ, ಕು. ಶ್ವೇತಾ ವಂದಿಸಿದರು. ಕು. ಅರ್ಚನಾ ಕಾರ್ಯಕ್ರಮ ನಿರೂಪಣೆಗೈದರು. ನಂತರ ಕಾಲೇಜಿನ ತರಗತಿ ಹಾಗೂ ಆವರಣದಲ್ಲಿ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ ನಡೆಯಿತು.