ಮಂಗಳೂರು ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಸಭೆಯು ದಿನಾಂಕ 15-10-22 ರಂದು ನಡೆಯಿತು.
ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಶೆಣೈ ಮಾತನಾಡಿ ಸಂಸ್ಥೆಯು ಉತ್ತಮ ಶಿಕ್ಷಣ ನೀಡುತ್ತಿದೆ. ಶಿಸ್ತು, ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ನೀಡುವ ಆದ್ಯತೆ, ಸಕಾರಾತ್ಮಕ ನಿಲುವುಗಳ ಬಗ್ಗೆ ಪೋಷಕರಿಗೆ ಗೊತ್ತಿದೆ. ಈ ಸಂಸ್ಥೆಗೇ ನಮ್ಮ ವಿದ್ಯಾರ್ಥಿಗಳನ್ನು ಕಳುಹಿಸುವುದು ನಮ್ಮ ಪ್ರಮುಖ ನಿರ್ಧಾರವಾಗಿದೆ. ಇಲ್ಲಿ ಕಲಿತ ಮಕ್ಕಳ ಭವಿಷ್ಯ ಅತ್ಯುತ್ತಮ. ಸಂಸ್ಥೆ ಎತ್ತರಕ್ಕೇರುವ ಎಲ್ಲಾ ಹೆಜ್ಜೆಗಳಿಗೆ ಹೆತ್ತವರಾದ ನಾವು ಬೆಂಬಲಿಸುತ್ತೇವೆ ಎಂದರು.
ಸಂಸ್ಥೆಯ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀ ಉದಯಶಂಕರ್ ನೀರ್ಪಾಜೆ ಮಾತನಾಡಿ, ಸಂಸ್ಥೆಯ ಶಿಕ್ಷಣ ವ್ಯವಸ್ಥೆ ಬಗ್ಗೆ ಹೆತ್ತವರು ಶ್ಲಾಘಿಸುತ್ತಾರೆ. ಆ ಮಾಹಿತಿ ಎಲ್ಲೆಡೆ ವ್ಯಾಪಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು. ಸಂಸ್ಥೆಯ ಬೆಳವಣಿಗೆಗಳ ಬಗ್ಗೆ ಸಮಾಜದಲ್ಲಿ ಧನಾತ್ಮಕ ಅಭಿಪ್ರಾಯವಿದೆ. ಅದನ್ನು ಪಸರಿಸುವ ಕಾರ್ಯದಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ತಮ್ಮಸಂಸ್ಥೆಯ ಬಗ್ಗೆ ಒಲವು- ಅಭಿಮಾನ ಹೊಂದಿರಬೇಕು ಹಾಗೆಯೇ ಭವಿಷ್ಯದಲ್ಲಿ ಉತ್ತಮ ಹೃದಯವಂತ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಬೇಕೆನ್ನುವ ಶ್ರೀ ಗುರುಗಳ ಆಶಯವನ್ನು ನಾವೆಲ್ಲರೂ ನೆರವೇರಿಸುವಂತಾಗಬೇಕು ಎಂದರು.
ಪ್ರಾಂಶುಪಾಲರಾದ ಗಂಗಾರತ್ನ, ವಿದ್ಯಾರ್ಥಿಗಳ ಪ್ರಗತಿಗಾಗಿ ಮತ್ತು ಶಿಸ್ತುಪಾಲನೆಗಾಗಿ ಶಿಕ್ಷಕ ವೃಂದ ಕೈಗೊಂಡಿರುವ “ಯೋಗಕ್ಷೇಮ” ಯೋಜನೆಯ ಅನುಷ್ಠಾನದ ಕುರಿತು ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸಂಸ್ಥೆಯ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸೇವಾಸಮಿತಿಯು ಅಹರ್ನಿಶಿ ನಡೆಸಿದ ಪ್ರಯತ್ನ- ಸಾಧನೆಗಳ ಕಡೆಗೆ ಬೆಳಕು ಚೆಲ್ಲಿದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಪ್ರತಿಮ್ಕುಮಾರ್ ಅವರು ಸ್ಕೌಟ್ಸ್ – ಗೈಡ್ಸ್ ಮತ್ತು ರೋವರ್ಸ್- ರೇಂಜರ್ಸ್ ವಿದ್ಯಾರ್ಥಿಗಳಿಗೆ ಇರುವ ವಿವಿಧ ರೀತಿಯ ತರಬೇತಿ, ಆಟೋಟ ತರಬೇತಿಯ ಮಾಹಿತಿ ಮತ್ತು ಸೌಲಭ್ಯಗಳ ಬಗ್ಗೆ ವಿವರಿಸಿದರು. ಶಿಕ್ಷಣ ಇಲಾಖೆ ಮತ್ತು ಸಂಸ್ಥೆಯ ವತಿಯಿಂದ ನವೆಂಬರ್ನಲ್ಲಿ ನಡೆಯಲಿರುವ ಹೋಬಳಿ ಹಾಗೂ ತಾಲೂಕು ಮಟ್ಟದ ಆಟೋಟ ಸ್ಪರ್ಧೆಗಳ ಕುರಿತು, ಹಾಗೆಯೇ ಡಿಸೆಂಬರ್ನಲ್ಲಿ ನಡೆಯಲಿರುವ “ಸ್ಕೌಟ್ಸ್ – ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ”ಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಭಾಗವಹಿಸಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಾ ವಿದ್ಯಾರ್ಥಿಗಳ ದೈನಂದಿನ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ, ಅತ್ಯಲ್ಪ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಈ ಸಂಸ್ಥೆಗೆ ಸೇರ್ಪಡೆಗೊಂಡು ಮುಂದೆ ಅತ್ಯಧಿಕ ಅಂಕಗಳನ್ನು ಗಳಿಸಿದ ಉದಾಹರಣೆಗಳನ್ನು ನೆನಪಿಸಿಕೊಂಡರು.
ನಿರ್ಣಯಗಳು :
ಪ್ರತೀ ತಿಂಗಳು ಶಿಕ್ಷಕ- ರಕ್ಷಕ ಸಂಘದ ಪದಾಧಿಕಾರಿಗಳ ಸಭೆಯನ್ನು ನಡೆಸಬೇಕು. ಪ್ರತೀ ಮೂರು ತಿಂಗಳಿಗೊಮ್ಮೆ ಪ್ರತೀ ತರಗತಿಗಳ ಹೆತ್ತವರ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಬೇಕು. ಹೊರಭಾಗದ ವಿದ್ಯಾರ್ಥಿಗಳ ಹೆತ್ತವರಿಗೆ ಇಲ್ಲಿನ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾಹಿತಿ ಪಸರಿಸಬೇಕು. ಪ್ರಚಾರ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂಬಿತ್ಯಾದಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಪ್ರಾಂಶುಪಾಲರಾದ ಗಂಗಾರತ್ನ ಸ್ವಾಗತಿಸಿ, ಸಂಸ್ಥೆಯ ಸಂಯೋಜಕಿ ಶ್ರೀಮತಿ ಜಯಂತಿ ವಂದಿಸಿದರು.