ಮಂಗಳೂರಿನ ಶ್ರೀ ಭಾರತೀ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2017-18ನೇ ಸಾಲಿನ ಶೈಕ್ಷಣಿಕ ವರ್ಷದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 24.12.2017ರಂದು ಪೂರ್ವಾಹ್ನ 11 ಗಂಟೆಗೆ ಕಲ್ಲಡ್ಕದ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನೆರವೇರಿತು.
ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಗೈದ ಶ್ರೀ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು, ನಾವು ಭಾರತೀಯರಾಗಿದ್ದುಕೊಂಡು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಕೊಳ್ಳಬೇಕು; ಹಾಗೆಯೇ ಭಾರತೀಯ ಶಿಕ್ಷಣ ಕ್ರಮವನ್ನು ಅರಿತುಕೊಳ್ಳುವುದರೊಂದಿಗೆ ಶಿಸ್ತುಬದ್ಧ ವ್ಯಕ್ತಿತ್ವವನ್ನು ರೂಪಿಸಿಕೊಂಡು ಉತ್ತಮ ಪ್ರಜೆಯಾಗಲು ಎನ್.ಎಸ್.ಎಸ್ ಸಹಕಾರಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಸೇವಾಸಮಿತಿಯ ಕಾರ್ಯದರ್ಶಿಗಳಾದ ಡಾ. ಜತ್ತಿ ಈಶ್ವರ ಭಟ್ ಅವರು, ಮಾನವನ ಇತಿಹಾಸದೊಂದಿಗೆ ವಿಜ್ಞಾನವೂ ಬೆಳೆದುಬಂದಿದೆ. ನಮ್ಮ ಪರಂಪರೆಯು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದು ವಿದ್ಯಾರ್ಥಿಗಳು ಶಿಕ್ಷಣದ ಜೊತೆಯಲ್ಲಿ ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಈಶ್ವರ ಪ್ರಸಾದ್ ಅವರು, ರಾ.ಸೇ.ಯೋಜನೆಯು ಶಿಸ್ತಿನ ಜೀವನಕ್ಕೊಂದು ದಾರಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಉಮಾಶಿವ ಕ್ಷೇತ್ರದ ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ರಾಕೋಡಿ ಈಶ್ವರ ಭಟ್ ಅವರು ಸೇವಾಮನೋಭಾವನೆಯೊಂದಿಗೆ ಉತ್ತಮ ಬದುಕು ನಡೆಸಲು ಎನ್.ಎಸ್.ಎಸ್ ದಾರಿ ತೋರಿಸುತ್ತದೆ ಎಂದರು.
ಇನ್ನೊಬ್ಬರು ಮುಖ್ಯ ಅತಿಥಿಗಳಾದ ಕಾಲೇಜಿನ ಸೇವಾಸಮಿತಿಯ ಜೊತೆ ಕಾರ್ಯದರ್ಶಿಗಳಾದ ಶ್ರೀ ಉಮೇಶ ಭಟ್ ಕೆ.ವಿ. ಅವರು ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣದೊಂದಿಗೆ ಇತಿಹಾಸದ ಅರಿವನ್ನೂ ಮೂಡಿಸಬೇಕು ಎಂದರು.
ಸಮಾರಂಭದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಗಂಗಾರತ್ನ ಮುಗಳಿ ಉಪಸ್ಥಿತರಿದ್ದರು. ಘಟಕದ ನಾಯಕಿ ಕು.ಸ್ವಾತಿ ಎಂ.ಆರ್. ಸ್ವಾಗತಿಸಿ, ಕು.ಕೀರ್ತಿ ಎನ್. ವಂದಿಸಿದರು. ವೆಂಕಟೇಶ ಕೆ.ಎಂ. ಕಾರ್ಯಕ್ರಮ ನಿರ್ವಹಣೆ ಮಾಡಿದರು.