ಶ್ರೀ ಭಾರತೀ ಕಾಲೇಜಿನಲ್ಲಿ ದಿನಾಂಕ 12.04.2019ರಂದು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ರಾಮಾಶ್ರಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಕಿಶೋರಿ ಕೆ.ಎಸ್. ಅವರು ಮಾತನಾಡುತ್ತಾ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡಿರುವುದರಿಂದ ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಸೇವಾ ಸಮಿತಿಯ ಆಡಳಿತಾಧಿಕಾರಿಗಳಾದ ಪ್ರೊ. ಶಂಕರ್ ಭಟ್ ಕಿನಿಲ ಅವರು, ವಿದ್ಯಾರ್ಥಿಗಳು ತಮ್ಮ ಬದುಕನ್ನು ಹೇಗೆ ರೂಪಿಸಿಕೊಳ್ಳಬಹುದು ಎನ್ನುವ ಬಗ್ಗೆ ಮಾರ್ಗದರ್ಶನ ನೀಡಿದರು. ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಎಂ.ಟಿ. ಭಟ್ ಅವರು ಮಾತನಾಡಿ, ಮುಂದೆ ಕಾಲೇಜಿನ ಏಳಿಗೆಯಲ್ಲಿ ಭಾಗಿಗಳಾಗುವುದು ಹಿರಿಯ ವಿದ್ಯಾರ್ಥಿಗಳ ಕರ್ತವ್ಯ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಈಶ್ವರ ಪ್ರಸಾದ್ ಅವರು, ಕಾಲೇಜಿನ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿರುತ್ತದೆ ಎಂದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಉಪನ್ಯಾಸಕಿ ಗಂಗಾರತ್ನ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ ಎಂದರು. ಉಪನ್ಯಾಸಕ ವೃಂದ, ಹಿರಿಯ ವಿದ್ಯಾರ್ಥಿಗಳು ಮತ್ತು ಕಿರಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೆಯೇ, ವಿದ್ಯೆಯೊಂದಿಗೆ ಸಮಗ್ರ ಚಟುವಟಿಕೆಗಳು ಸದಾಕಾಲವೂ ವಿದ್ಯಾಸಂಸ್ಥೆಯನ್ನು ಬೆಳಗುತ್ತಿರಲಿ ಎನ್ನುವ ಸಂಕೇತವಾಗಿ ದೀಪವನ್ನು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಹಸ್ತಾಂತರಗೊಳಿಸಿದರು. ಈ ಸಂದರ್ಭದಲ್ಲಿ ಇದೇ ಶಿಕ್ಷಣ ಸಂಸ್ಥೆಯಲ್ಲಿ ಎಲ್.ಕೆ.ಜಿ.ಯಿಂದ ಪದವಿ ತನಕ ವಿದ್ಯಾಭ್ಯಾಸ ಪಡೆದ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಕು. ಯಶಸ್ವಿ ಹಾಗೂ ಅಂತಿಮ ಬಿ.ಎಸ್ಸಿ. ವಿದ್ಯಾರ್ಥಿ ಚಂದ್ರ ಇವರನ್ನು ಸನ್ಮಾನಿಸಲಾಯಿತು. ಕಿರಿಯ ವಿದ್ಯಾರ್ಥಿಗಳು ಆಯೋಜಿಸಿದ ಈ ಸಮಾರಂಭದಲ್ಲಿ ಅವರು ವಿವಿಧ ಸ್ಪರ್ಧೆಗಳನ್ನು ನಡೆಸಿ ಪ್ರಾತ್ಯಕ್ಷಿಕೆಯ ಮೂಲಕ ವಾರ್ಷಿಕ ಚಟುವಟಿಕೆಗಳ ಚಿತ್ರಣ ನೀಡಿದರು. ವಿದ್ಯಾರ್ಥಿನಿ ಗಂಗಾ ಸತ್ಯನಾರಾಯಣ ಹೆಗ್ಡೆ ಸ್ವಾಗತಿಸಿ, ಅಕ್ಷತ್ ವಂದಿಸಿದರು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು.