ಅಂತರಂಗದಲ್ಲಿ ದೃಢವಿಶ್ವಾಸವಿರಬೇಕು
ನಂತೂರು, ಮಾ.30 : ಜೀವನದಲ್ಲಿ ಎಲ್ಲವೂ ಇದೆ. ದೃಢವಿಶ್ವಾಸ, ನಾನು ಶ್ರೇಷ್ಠ ಎಂಬ ಮನೋಭಾವನೆ ಅಂತರಂಗದಲ್ಲಿರಬೇಕು. ಆಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾನೇ ಶ್ರೇಷ್ಠ ಎಂಬ ಅಹಂಕಾರವಿರಬಾರದು. ತಾನೇನೂ ಅಲ್ಲ ಎಂಬ ಭಾವನೆಯೂ ಇರಬಾರದು ಎಂದು ನಿವೃತ್ತ ಪ್ರಾಂಶುಪಾಲ ಡಾ.ಶಿವಶಂಕರ ಭಟ್ ಹೇಳಿದರು.
ಅವರು ಬುಧವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ಸ್ಪ್ರೌಟ್ಸ್ – 2022 ಬೇಸಿಗೆ ಶಿಬಿರದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ನಿವೃತ್ತ ಪ್ರಾಂಶುಪಾಲ ಪ್ರೊ.ಯು.ಎಸ್.ವಿಶ್ವೇಶ್ವರ ಭಟ್ ಅವರು ಉದ್ಘಾಟಿಸಿ, ಚಿಕ್ಕಮಕ್ಕಳಲ್ಲಿ ನಿರಂತರ ಕುತೂಹಲ, ಪ್ರಶ್ನೆಗಳು ಹುಟ್ಟುತ್ತವೆ. ಅದು ಜ್ಞಾನ ಪಡೆಯುವ ಮಾರ್ಗ. ಕ್ರಮೇಣ ಪ್ರಶ್ನೆ ಕೇಳುವ ಮನೋಭಾವ ದೂರವಾಗಬಾರದು ಎಂದು ಹೇಳಿದರು.
ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜೀವನ್ ದಾಸ್ ಅವರು ಮಾತನಾಡಿ, ಮಾನವ ಜನ್ಮ ಶ್ರೇಷ್ಠ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕಗೊಳಿಸಬೇಕು. ಅದಕ್ಕಾಗಿ ಒಳಿತನ್ನು ಸಂಪಾದಿಸಬೇಕೆಂದರು. ಹಿರಿಯ ಶಿಕ್ಷಕಿ ಸುಭದ್ರಾ ಭಟ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಶ್ರೀ ಭಾರತೀ ಪದವಿ ಪೂರ್ವ ಮತ್ತು ಪ್ರೌಢಶಾಲೆಯ ಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಪ್ರಸ್ತಾಪಿಸಿದರು. ಉಪನ್ಯಾಸಕಿ ದಿವ್ಯಾ ರೈ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಗಾಯತ್ರಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಶ್ವೇತಾ ಮತ್ತು ರಶ್ಮಿ ಪಿ.ಎಸ್. ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಭಾರತೀ ವಂದಿಸಿದರು. ಬಳಿಕ ಪ್ರೊ.ವಿಶ್ವೇಶ್ವರ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನೀಡಿ ತರಬೇತುಗೊಳಿಸಿದರು. ಅಪರಾಹ್ನ ಉಪನ್ಯಾಸಕಿ ರಶ್ಮಿ, ಸುಭದ್ರಾ ಭಟ್ ಮತ್ತು ಶಿಕ್ಷಕಿಯರು ಶಿಬಿರ ನಡೆಸಿಕೊಟ್ಟರು.