ನಂತೂರು, ಜೂ.6 : ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ದಿನಾಂಕ 3-6-23 ರಂದು ಹೊಸ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅನಂತ ಸುಬ್ರಹ್ಮಣ್ಯ ಶರ್ಮ ಅವರು ನಾವು ಈ ಸಮಾಜದಿಂದ, ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುತ್ತಾ ವಿನೀತಭಾವದಿಂದ ಕೃತಜ್ಞರಾಗಿರಬೇಕು ಎಂದರು.
ಶ್ರೀ ಭಾರತೀ ಸಮೂಹ ಸಂಸ್ಥೆಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಗಣೇಶಮೋಹನ ಕಾಶಿಮಠ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗುವಂತಹ ವ್ಯವಸ್ಥೆ ಈ ಸಂಸ್ಥೆಯಲ್ಲಿದೆ. ಎಲ್ಲರೂ ಇದರ ಪ್ರಯೋಜನಪಡೆದುಕೊಳ್ಳಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿದ ರಂಗ ನಿರ್ದೇಶಕ ಶ್ರೀ ಮೌನೇಶ್ ವಿಶ್ವಕರ್ಮ ಅವರು ಮಾತನಾಡಿ, ರಂಗ ತರಬೇತಿ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬುತ್ತದೆ. ಮಕ್ಕಳು ಶಿಸ್ತು, ಉತ್ತಮ ನಡವಳಿಕೆಯನ್ನು ಶಿಕ್ಷಣದಿಂದ ಪಡೆದುಕೊಳ್ಳುವಂತಾಗಬೇಕು. ಶ್ರೀ ಭಾರತೀ ಸಮೂಹ ಸಂಸ್ಥೆ ಅದನ್ನು ಕೊಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಅಂಕಗಳನ್ನು ಪಡೆದು ಎಂಟನೇ ತರಗತಿಗೆ ಸೇರಿದ ವಿದ್ಯಾರ್ಥಿನಿ ವರ್ಷಿಣಿಯನ್ನು ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸೇವಾಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಉದಯಶಂಕರ ನೀರ್ಪಾಜೆ ಅವರು, ಶ್ರೀ ಗುರುಗಳ ಕೃಪಾಶೀರ್ವಾದಗಳೊಂದಿಗೆ ನಡೆಯುತ್ತಿರುವ ನಮ್ಮ ಸಂಸ್ಥೆಯು ಮುಂದಿನ ದಿನಗಳಲ್ಲಿ ಏಕರೂಪದ ನೀತಿ ನಿಯಮಗಳನ್ನು ರೂಪಿಸಿಕೊಂಡು ಇನ್ನಷ್ಟು ಉನ್ನತಿಗೇರಲಿದೆ ಎಂದರು.
ಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ಶುಭಾಶಂಸನೆಗೈದರು.
ಉಪಪ್ರಾಂಶುಪಾಲೆ ಗಾಯತ್ರಿ ಶೆಣೈ ಸ್ವಾಗತಿಸಿ, ಉಪನ್ಯಾಸಕ ಕಾರ್ತಿಕ್ಕೃಷ್ಣ ವಂದಿಸಿದರು. ರಶ್ಮಿ ಎ. ನಿರೂಪಣೆ ಗೈದರು. ಉಪನ್ಯಾಸಕರಾದ ವೀಣಾ, ಸಂಗೀತಾ ಮತ್ತು ಭವ್ಯಾ ಪರಿಚಯಿಸಿದರು.