ನಂತೂರು, ಸೆ.6 : ಮಂಗಳೂರು ನಂತೂರು ಶ್ರೀ ಭಾರತೀ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ನಾಯಕ್ ಅವರನ್ನು ಗೌರವಿಸಿ ಶಿಕ್ಷಕರ ದಿನಾಚರಣೆಯನ್ನು ಅಪೂರ್ವವಾಗಿ ಆಚರಿಸಲಾಯಿತು.
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ನಾರಾಯಣ ನಾಯಕ್, ಶಿಕ್ಷಕ ವೃತ್ತಿ ಅತೀ ಶ್ರೇಷ್ಠ ಇಲ್ಲಿ ಸಿಗುವ ಸಂತೋಷ ಬೇರೆ ಎಲ್ಲೂ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಶ್ರದ್ಧೆ, ಛಲ ಮತ್ತು ಯಶಸ್ಸಿನ ಹಸಿವು ಇದ್ದಾಗ ಸಾಧನೆ ಸಾಧ್ಯ. ವೈಯಕ್ತಿಕ ಸಾಧನೆ ಅನಂತರ ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಜಯಪ್ರಕಾಶ್ ಭಟ್ ಮತ್ತು ನಿರ್ಮಲಾ ಅವರನ್ನು ಸ್ಕೌಟ್ ಗೈಡ್ ನಲ್ಲಿ ಮಾಡಿದ ಸಾಧನೆಯನ್ನು ಗುರುತಿಸಲಾಯಿತು.
ಪ್ರಾಂಶುಪಾಲೆ ವಿದ್ಯಾ ಭಟ್ ಮಾತನಾಡಿ ಸಮಾಜಕ್ಕೆ ಶಿಕ್ಷಕರ ಮಹತ್ವದ ಕುರಿತು ತಿಳಿಸಿ ಪ್ರತೀ ವರುಷ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಮಾಡುವ ಮಹತ್ವದ ಕುರಿತು ತಿಳಿಸಿದರು.
ಹಿರಿಯ ಶಿಕ್ಷಕಿ ಸುಭದ್ರಾ ಭಟ್ ಗೌರವಾನ್ವಿತರನ್ನು ಪರಿಚಯಿಸಿದರು. ಶಿಕ್ಷಕಿ ದಿವ್ಯಾ ಸ್ವಾಗತಿಸಿ, ನಿಖಿತಾ ವಂದಿಸಿದರು. ಶಿಕ್ಷಕಿ ಸಾಧನಾ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರತಿಮ್ ಕುಮಾರ್ ಎಸ್. ಅವರು ಸ್ಕೌಟ್ ಸಾಧಕರನ್ನು ಪರಿಚಯಿಸಿದರು. ಉಪನ್ಯಾಸಕ ಅನಂತನಾರಾಯಣ ಪದಕಣ್ಣಾಯ ಸಹಕರಿಸಿದರು. ಉಪನ್ಯಾಸಕಿ ಪವಿತ್ರಾ ವಿಜೇತರ ಪಟ್ಟಿ ವಾಚಿಸಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.