ಪರಿಸರ ರಕ್ಷಣೆಯ ಜವಾಬ್ದಾರಿ ಮರೆಯಬೇಡಿ : ನಿವೃತ್ತ ಸೈನಿಕ ಶರತ್ ಭಂಡಾರಿ ಕರೆ
ನಂತೂರು, ಮಾ.3೦ : ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ದೇಶದಾದ್ಯಂತ ವಿವಿಧ ರೀತಿಯ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರಕೃತಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕು. ಸ್ವಚ್ಛತಾ ಆಂದೋಲನ, ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಮರೆಯಬಾರದು.ಮರ, ಮರಳು ಮಾಫಿಯಗಳಿಂದ, ದುಶ್ಚಟಗಳಿಂದ ದೂರವಿರಬೇಕು, ಪ್ರಾಮಾಣಿಕರಾಗಿರಬೇಕು ಎಂದು ನಿವೃತ್ತ ಆರ್ಮಿ ಆಫೀಸರ್-ರಬ್ಬರ್ ಪ್ಲಾಂಟರ‍್ಸ್ ಅಸೋಸಿಯೇಶನ್ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಕರೆ ನೀಡಿದರು.
ಅವರು ಬುಧವಾರ ಮಂಗಳೂರು ನಂತೂರು ಪದವು ಶ್ರೀ ಭಾರತೀ ಕಾಲೇಜಿನ ವಾರ್ಷಿಕೋತ್ಸವ, ಬಹುಮಾನ ವಿತರಣೆ (28.03.2018) ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಮಾರಂಭವನ್ನು ಉದ್ಘಾಟಿಸಿ, ಮಾತನಾಡಿದರು.
ಕಾಲೇಜು ಸೇವಾ ಸಮಿತಿ ಉಪಾಧ್ಯಕ್ಷ ಎಂ.ಟಿ.ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮುಖ್ಯ. ಹೆಚ್ಚು ಜ್ಞಾನ ಸಂಪಾದಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜೀವನದ ಯಶಸ್ಸಿಗಾಗಿ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿನಯ್ ಭಾರದ್ವಾಜ್, ಸದಾನಂದ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಗುರುರಾಜ ಭಟ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಶರತ್, ಜತೆಕಾರ್ಯದರ್ಶಿ ಕೀರ್ತಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನ, ಕಲಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಆಲಂಗಾರು ವರದಿ ಮಂಡಿಸಿದರು. ಉಪನ್ಯಾಸಕಿ ವೀಕ್ಷಿತಾ ಸ್ವಾಗತಿಸಿ, ಉಪನ್ಯಾಸಕಿ ಬಿಂದು ಕೆ.ಎನ್. ವಂದಿಸಿದರು. ಉಪನ್ಯಾಸಕಿಯರಾದ ಶೈಲೆಟ್, ವಾಣಿ, ಅನುಷಾ ಸಹಕರಿಸಿದರು.ಉಪನ್ಯಾಸಕಿ ಗಂಗಾರತ್ನ ಮುಗುಳಿ ಕಾರ್ಯಕ್ರಮ ನಿರ್ವಹಿಸಿದರು.