ನಂತೂರು ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ದಿನಾಂಕ 24-3-22 ರಂದು ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ರಾಮಕೃಷ್ಣ ಮಠದ ಶ್ರೀ ಸ್ವಾಮಿ ರಘುರಾಮಾನಂದ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಪ್ರವೇಶಪತ್ರಗಳನ್ನು ಹಸ್ತಾಂತರಿಸಿ, ‘ನಿನ್ನ ಏಳಿಗೆಗೆ ನೀನೇ ಶಕ್ತಿ ‘ ಎಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತನ್ನು ಉಲ್ಲೇಖಿಸುತ್ತಾ, ಆತ್ಮವಿಶ್ವಾಸದಿಂದ ನೀವು ನಿಮ್ಮ ಗುರಿಯನ್ನು ತಲುಪುವ ಪ್ರಯತ್ನ ಮಾಡಬೇಕು ಎಂದು ಆಶೀರ್ವಚನ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೀವನ್ದಾಸ್ ಅವರು ಪ್ರವೇಶ ಪತ್ರದ ಪ್ರಾಮುಖ್ಯತೆ ವಿವರಿಸುತ್ತಾ, ಪರೀಕ್ಷೆಗಾಗಿ ನಡೆಸುವ ತಯಾರಿಗಳ ಬಗ್ಗೆ ಬೆಳಕು ಚೆಲ್ಲಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೇವಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿಗಳಾದ ಶ್ರೀ ಎಂ.ಟಿ ಭಟ್ ಅವರು ಎಲ್ಲ ವಿದ್ಯಾರ್ಥಿಗಳು ಶ್ರದ್ಧೆಯಿಂದ ಓದಿ ಉತ್ತಮ ಅಂಕ ಗಳಿಸಿ ಎಂದು ಶುಭಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಗಂಗಾರತ್ನ ಮಾತನಾಡಿ, ಪ್ರಶ್ನೆಪತ್ರಿಕೆಯನ್ನು ನಿಮ್ಮ ಗೆಳೆಯನಂತೆ ತಿಳಿದುಕೊಳ್ಳಬೇಕು. ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಗಳಿಸಿ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಿಕ್ಷಕಿ ನಿಖಿತಾ ಸ್ವಾಮೀಜಿಯವರನ್ನು ಪರಿಚಯಿಸಿದರು. ಹಿರಿಯ ಶಿಕ್ಷಕಿ ಶ್ರೀಮತಿ ಸುಭದ್ರಾ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಪ್ರತಿಮ್ಕುಮಾರ್ ವಂದಿಸಿದರು. ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.