ಮಂಗಳೂರು ನಂತೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆ ಅತ್ಯಂತ ಸಂಭ್ರಮದಿಂದ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸೇವಾ ಸಮಿತಿಯ ಸದಸ್ಯರು ಹಾಗೂ ಮಂಗಳೂರು ಹವ್ಯಕ ಮಂಡಲದ ಕಾರ್ಯದರ್ಶಿಗಳಾದ ಶ್ರೀ ರಮೇಶ್ಭಟ್ ಸರವು ಅವರು ಮಾತನಾಡಿ, ನಮ್ಮ ನಾಡಿನ ಅದೆಷ್ಟೋ ಸಾಧಕರು ನಾಡಿಗೆ ಗೌರವ ತಂದುಕೊಟ್ಟಿದ್ದಾರೆ; ಇನ್ನು ಮುಂದೆ ವಿದ್ಯಾರ್ಥಿಗಳಾದ ನಿಮ್ಮ ಮಧ್ಯದಿಂದ ಅಂತಹ ಸಾಧಕರು ಎದ್ದು ಬರಬೇಕು ಎಂದರು.
ಮುಖ್ಯ ಅತಿಥಿಗಳಾದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮ ಅವರು ಮಾತನಾಡಿ ಕನ್ನಡ ಭಾಷೆಯನ್ನು ನಾವು ಬರೆದಂತೆ ಓದುತ್ತೇವೆ ಆದರೆ ಇಂಗ್ಲಿಷ್ ಭಾಷೆಯಲ್ಲಿ ಬರೆದಂತೆ ಓದಲು ಸಾಧ್ಯವಾಗುವುದಿಲ್ಲ. ಎಲ್ಲ ಭಾಷೆಗಳೂ ಬೇಕು ಆದರೆ ನಮ್ಮ ಭಾಷೆಯಲ್ಲಿ ನಾವು ಕನಸು ಕಾಣಬೇಕು ಬೆಳೆಯಬೇಕು ಬದುಕಬೇಕು ಎಂದರು.
ಇನ್ನೊಬ್ಬರು ಮುಖ್ಯ ಅತಿಥಿಗಳಾದ ಖ್ಯಾತ ಲೇಖಕಿ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಅವರು ಮಾತನಾಡಿ ಕನ್ನಡ ಭಾಷೆ ನಮ್ಮ ಪಂಚೇಂದ್ರಿಯಗಳಿಗೆ ಹಿತವಾಗುವಂತಹ ಭಾಷೆ, ಕನ್ನಡದ ಒಂದೊಂದು ನುಡಿಯೂ ನಮ್ಮನ್ನು ರೋಮಾಂಚನಗೊಳಿಸುತ್ತದೆ ಎಂದರು. ಪ್ರಾಂಶುಪಾಲರಾದ ಗಂಗಾರತ್ನ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಉಪನ್ಯಾಸಕರಾದ ಕಾರ್ತಿಕ್ ಮತ್ತು ಗಾಯತ್ರಿ ಶ್ರೀನಿವಾಸ್ ಅತಿಥಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಉಪನ್ಯಾಸಕಿಯರಾದ ಗಾಯತ್ರಿ ಎನ್. ಎಸ್, ವೀಣಾ,ಗಾಯತ್ರಿ ಶ್ರೀನಿವಾಸ್ ನಿರ್ವಹಣೆ ಗೈದರು.
ವಿದ್ಯಾರ್ಥಿನಿ ಅಮೃತಲಕ್ಷೀ ಕನ್ನಡ ನಾಡು ನುಡಿಯ ಬಗೆಗಿನ ಸ್ವರಚಿತ ಕವನವನ್ನು ವಾಚಿಸಿದರು.
ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಿದರು.
ವಿದ್ಯಾರ್ಥಿನಿ ಪ್ರತಿಭಾ ನಿರ್ವಹಣೆ ಗೈದರು. ಪ.ಪೂ ವಿಭಾಗದ ವಿದ್ಯಾರ್ಥಿ ನಾಯಕ ಕಾರ್ತಿಕ್ ಸ್ವಾಗತಿಸಿ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿ ಸಾನ್ವಿ ಅರುಣ್ ವಂದಿಸಿದರು. ವಿದ್ಯಾರ್ಥಿನಿ ಅಮೃತಲಕ್ಷ್ಮೀ ನಿರೂಪಣೆ ಗೈದರು.