ರಾಸಾಯನಿಕ ಮುಕ್ತ ಪರಿಸರದ ಬಗ್ಗೆ ಜಾಗೃತಿ ಕಾರ್ಯಕ್ರಮ

 ರಾಸಾಯನಿಕ ರಹಿತ ಗಣೇಶ ಕುರಿತು ಕಾರ್ಯಾಗಾರ

ಪ್ಲಾಸ್ಟಿಕ್ ಬಳಕೆ ನಿಯಂತ್ರಣದಿಂದ ಸುಂದರ ಪರಿಸರ ನಿರ್ಮಾಣ : ರಾಜಶೇಖರ್ ಪುರಾಣಿಕ್

ನಂತೂರು, ಸೆ.6 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ರಾಸಾಯನಿಕ ರಹಿತ ಗಣೇಶ ಮತ್ತು ಪ್ಲಾಸ್ಟಿಕ್ ಜಾಗೃತಿ ಕುರಿತು ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಾತನಾಡಿದ ಪರಿಸರ ಅಽಕಾರಿ ರಾಜಶೇಖರ್ ಪುರಾಣಿಕ್ ಅವರು ಪ್ಲಾಸ್ಟಿಕ್ ಬಳಕೆ ನಿಯಂತ್ರಣಗೊಂಡಾಗ ಸುಂದರ ಪರಿಸರ ನಿರ್ಮಾಣವಾಗತ್ತದೆ. ಪ್ರತಿ ಮನೆಯಲ್ಲಿ ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡಾಗ, ಪ್ರತಿ ಮನೆಯೂ ಪರಿಸರಸ್ನೇಹಿಯಾಗುತ್ತದೆ. ರಾಸಾಯನಿಕ ವಸ್ತುಗಳಿಂದ ತಯಾರಿಸಲ್ಪಟ್ಟ ಬಣ್ಣಗಳಿಂದ ಅಲಂಕರಿಸಲ್ಪಟ್ಟ ಗಣೇಶನ ಮೂರ್ತಿಗಳು ಇಂದು ಜಲ ಮಾಲಿನ್ಯಕ್ಕೆ ಕಾರಣವಾಗುತ್ತವೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹಿರಿಯ ವೈಜ್ಞಾನಿಕ ಅಽಕಾರಿ ಜಯಪ್ರಕಾಶ್ ಎಸ್.ನಾಯಕ್ ಅವರು ಮಾತನಾಡಿ, ಪ್ಲಾಸ್ಟಿಕ್‌ನಿಂದ ಜೈವಿಕ ಪರಿಸರದಲ್ಲಿ ಆಗುತ್ತಿರುವ ತೊಂದರೆ ಮತ್ತು ಸರಿಯಾಗಿ ತ್ಯಾಜ್ಯಗಳ ವಿಲೇವಾರಿಯಾಗದೆ ಉಂಟಾಗುವ ಅನಾಹುತ, ರಾಸಾಯನಿಕ ವಸ್ತುಗಳನ್ನು ಬಳಸಿ ನಿರ್ಮಿಸಲ್ಪಡುತ್ತಿರುವ ಗಣೇಶನ ಮೂರ್ತಿಯು ಪರಿಸರಕ್ಕೆ ಹಾನಿಕಾರಕ ಹಾಗೂ ನಿಯಂತ್ರಣದ ವಿಧಾನ, ಪಟಾಕಿಯಿಂದ ಆಗುತ್ತಿರುವ ಅನಾಹುತ, ಪರಿಸರಕ್ಕೆ ಅದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಮಾತನಾಡಿ, ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಿದಾಗ, ಅವರು ಬೆಳೆಯುವ ಹಾಗೂ ಕಲಿಯುವ ಶಾಲಾ ಕಾಲೇಜುಗಳ ಪರಿಸರದ ಬಗ್ಗೆ ಕಾಳಜಿ ಮೂಡುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ.ಈಶ್ವರ ಪ್ರಸಾದ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ರಾಸಾಯನಿಕ ರಹಿತ ಗಣೇಶನನ್ನು ಇಡುವುದರ ಮೂಲಕ ಹಾಗೂ ನಮ್ಮ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಕಡಿಮೆ ಬಳಸುವ ಮೂಲಕ ಪರಿಸರವನ್ನು ಸ್ವಚ್ಛ ಮತ್ತು ಆರೋಗ್ಯವಂತವಾಗಿಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ರಾಷ್ಟ್ರೀಯ ಸೇವಾ ಯೋಜನಾಽಕಾರಿ ಅಶೋಕ್ ಎಸ್. ಸ್ವಾಗತಿಸಿ, ವಿದ್ಯಾರ್ಥಿ ವಿಪಿನ್ ವಂದಿಸಿದರು. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin