*ಮಂಗಳೂರು, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು : ಯೋಗ, ಭರತನಾಟ್ಯ, ಕರಾಟೆ, ಸಂಗೀತ, ಪೈಥಾನ್ ಕಂಪ್ಯೂಟರ್ ಕೋರ್ಸ್ ಉದ್ಘಾಟನೆ*
ನಂತೂರು, ಫೆ.3 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ವಠಾರದಲ್ಲಿ ಸಂಗೀತ, ಭರತನಾಟ್ಯ, ಕರಾಟೆ, ಯೋಗ ತರಗತಿಗಳು ಮತ್ತು ಪೈಥಾನ್ ಕಂಪ್ಯೂಟರ್ ಕೋರ್ಸ್ಗಳನ್ನು ರವಿವಾರ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ಉದ್ಘಾಟಿಸಲಾಯಿತು.
ಯೋಗಗುರು ಗೋಪಾಲಕೃಷ್ಣ ಭಟ್ ದೇಲಂಪಾಡಿ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ, ಮಾತನಾಡಿ, ವಿದ್ಯಾರ್ಥಿಗಳನ್ನು ವಿವಿಧ ತರಬೇತಿಗಳ ಮೂಲಕ ಪ್ರೋತ್ಸಾಹಿಸಬೇಕು. ಸಮಗ್ರ ಬೆಳವಣಿಗೆ, ಪಠ್ಯ, ಪಠ್ಯೇತರ ಶಿಕ್ಷಣ ಅತೀ ಮುಖ್ಯ. ಯೋಗ ಆರೋಗ್ಯಕರವೆನ್ನುವುದು ನಿಶ್ಚಿತ. ಇಲ್ಲಿ ಧ್ಯಾನ, ಮುದ್ರಾ ಯೋಗಗಳನ್ನು ಕಲಿಸಿಕೊಡಲಾಗುತ್ತದೆ. ಕಲೆಗಳನ್ನು ಉಳಿಸಿ, ಬೆಳೆಸುವುದಕ್ಕೆ ಎಲ್ಲರ ಪ್ರೋತ್ಸಾಹವಿರಬೇಕು ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ರವಿ ಅಲೆವೂರಾಯ ವರ್ಕಾಡಿ ಅವರು ಭಾಗವಹಿಸಿ, ಮಾತನಾಡಿ, ಸಂಖ್ಯೆ ಮುಖ್ಯವಲ್ಲ, ಗುಣಮಟ್ಟದ ಶಿಕ್ಷಣ ಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕಲೆಯನ್ನು ಆಸ್ವಾದಿಸುವವರು ಇರುತ್ತಾರೆ. ಕಲೆಗಳಿಗೆ ಸಂವೇದನೆ ಮುಖ್ಯ, ಭಾಷೆಯಲ್ಲ. ಇದರ ಪ್ರಯೋಜನ ಎಲ್ಲರೂ ಪಡೆಯುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಅವರು ಭಾಗವಹಿಸಿ, ಮಾತನಾಡಿ, ಹಣ ಶಾಶ್ವತವಲ್ಲ, ಕಲೆ ಶಾಶ್ವತ. ಸಂಗೀತ, ನೃತ್ಯ ಎಲ್ಲವೂ ಮುಖ್ಯ. ಧನಾತ್ಮಕವಾಗಿ ಯೋಚಿಸಿ, ಋಣಾತ್ಮಕ ಯೋಚನೆಗಳನ್ನು ಕೈಬಿಟ್ಟು ಕಲಾ ನೈಪುಣ್ಯತೆಯನ್ನು ಬೆಳೆಸಿಕೊಳ್ಳಬೇಕು. ಶ್ರೀ ಭಾರತೀ ಸಮೂಹ ಸಂಸ್ಥೆ ಕರೆದು ಎಲ್ಲರಿಗೂ ಅವಕಾಶ ನೀಡುತ್ತಿದೆ. ಎಂದರು.
ಮುಖ್ಯ ಅತಿಥಿಗಳಾಗಿ ಸಂತೋಷ್ ಪಣಪಿಲ ಅವರು ಭಾಗವಹಿಸಿ, ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅಂಕ ಗಳಿಸಲು ಸಮಸ್ಯೆಯಾಗುತ್ತದೆ ಎಂಬ ಮಾತು ಸರಿಯಲ್ಲ. ಸ್ವಲ್ಪ ಕಲಿತಾಗಲೇ ಅಹಂಕಾರ ಪಡದೇ ಉತ್ತಮ ಶಿಕ್ಷಣ ಪಡೆಯಬೇಕು. ಮನೋರಂಜನೆ ಮತ್ತು ಸ್ಟ್ರೆಸ್ ಕಡಿಮೆಗೊಳಿಸಲು ಕಲೆಗಳು ಬೇಕು. ಇಲ್ಲದ ಕಾರಣ ನೀಡಿ ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು. ಕಲೆಗೆ ಗೌರವ ನೀಡಿದರೆ ಕಲೆ ನಮಗೆ ಗೌರವ ತಂದುಕೊಡುತ್ತದೆ ಎಂದರು.
ತರಬೇತುದಾರರಾದ ಭರತನಾಟ್ಯ ಕಲಾವಿದೆ ಶೈಲಜಾ ಶಿವಶಂಕರ್, ಕರಾಟೆ ಶಿಕ್ಷಕ ಅರ್ಜುನ್ ಶೆಟ್ಟಿ, ಸಂಗೀತ ಶಿಕ್ಷಕಿ ಸಹನಾ ಪ್ರವೀಣ್ ಮಾತನಾಡಿದರು.
ಶ್ರೀ ಭಾರತೀ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಶಂಕರ ಭಟ್ ಕಿನಿಲ, ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್, ಸದಸ್ಯ ರಮೇಶ್ ಭಟ್ ಸರವು, ಪದವಿ ಕಾಲೇಜು ಪ್ರಾಂಶುಪಾಲ ಡಾ.ಈಶ್ವರಪ್ರಸಾದ್ ಎ., ಪಿಯು ವಿಭಾಗದ ಪ್ರಾಂಶುಪಾಲೆ ವಿದ್ಯಾ ಭಟ್, ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಉಪಸ್ಥಿತರಿದ್ದರು.
ಉಪನ್ಯಾಸಕ ಅಶೋಕ್ ಎಸ್. ಸ್ವಾಗತಿಸಿದರು. ಉಪನ್ಯಾಸಕಿ ಗಂಗಾರತ್ನ ಮುಗುಳಿ ನಿರೂಪಿಸಿದರು. ಉಪನ್ಯಾಸಕ ಪ್ರವೀಣ್ ಪಿ. ವಂದಿಸಿದರು.