ಸಂಸ್ಕೃತವು ರಾಷ್ಟ್ರೀಯ ಏಕತೆಯನ್ನುಂಟುಮಾಡುವ ಶ್ರೇಷ್ಠ ಭಾಷೆ : ಲಕ್ಷ್ಮೀ ಭಟ್
ನಂತೂರು, ಆ.26 : ಸಂಸ್ಕೃತವು ಸತ್ವಯುತವಾದ ಜೀವಂತ ಭಾಷೆ. ಈ ಭಾಷೆಯಲ್ಲಿರುವ ವಿವಿಧ ಶಾಸ್ತ್ರ-ಗ್ರಂಥಗಳು ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಸಂಸ್ಕೃತವು ರಾಷ್ಟ್ರೀಯ ಏಕತೆಯನ್ನುಂಟುಮಾಡುವ ಶ್ರೇಷ್ಠ ಭಾಷೆಯಾಗಿದೆ ಎಂದು ಪುತ್ತೂರು ನೆಹರೂನಗರದ ವಿವೇಕಾನಂದ ನಿವೇದಿತಾ ಶಿಶು ಮಂದಿರದ ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮೀ ಭಟ್ ಅವರು ಹೇಳಿದರು.
ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸಂಸ್ಕೃತ ಸಂಘ ಆಯೋಜಿಸಿದ ಸಂಸ್ಕೃತ ದಿನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿಶೇಷ ಉಪನ್ಯಾಸ ನೀಡಿದರು.
ಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಶಂಕರ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಸ್ಕೃತ ಕಲಿಕೆ ಇಳಿಮುಖವಾಗಿದೆ. ನಾವು ಕಲಿಕೆಯ ಬಳಕೆಗಳನ್ನು ಹೆಚ್ಚಿಸಿ, ಸಂಸ್ಕೃತದ ತೇರನ್ನು ಎಳೆಯಬೇಕು ಎಂದರು.
ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಗುರುರಾಜ ಭಟ್ ಅವರು ಮಾತನಾಡಿ, ಭಾಷೆಗಳಲ್ಲಿ ಸಂಸ್ಕೃತ ಅತ್ಯಂತ ಮಧುರವಾದ ಭಾಷೆ. ಅದು ದೇವಭಾಷೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಎ. ಅವರು ಮಾತನಾಡಿ ಸಂಸ್ಕೃತ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಪ್ರಾಚೀನ ಭಾರತದ ವೈಜ್ಞಾನಿಕ ವಿಚಾರಗಳನ್ನು ಅರಿತುಕೊಳ್ಳಲು ಸಂಸ್ಕೃತ ಭಾಷೆ ಮೂಲಕ ಸಾಧ್ಯ ಎಂದರು.
.ಪೂ ಕಾಲೇಜು ಪ್ರಾಂಶುಪಾಲೆ ವಿದ್ಯಾ ಭಟ್, ಶಿಕ್ಷಕಿ ಅನಘಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಹಾಡು, ಭಾಷಣ ಮತ್ತು ಸಂಸ್ಕೃತ ಸಂಭಾಷಣೆ ಕಾರ್ಯಕ್ರಮ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾರದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಸ್ವಾಗತಿಸಿ, ಅರ್ಚನಾ ವಂದಿಸಿದರು. ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು.
ರಕ್ಷಾ ಬಂಧನ :
ಇದೇ ಸಂದರ್ಭ ರಕ್ಷಾ ಬಂಧನದ ಆಚರಣೆಯನ್ನು ನಡೆಸಲಾಯಿತು. ಆರೆಸ್ಸೆಸ್ನ ಮಹಾನಗರ ಸಹಸೇವಾ ಪ್ರಮುಖ್ ಪ್ರಶಾಂತ್ ಹೆಗಡೆ ಅವರು ರಕ್ಷಾ ಬಂಧನದ ಬಗ್ಗೆ ಮಾತನಾಡಿ, ರಕ್ಷೆಯನ್ನು ಕಟ್ಟುವ ಮೂಲಕ ದೇಶ ನನ್ನದು ಎಂಬ ಭಾವನೆ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.ಉಪನ್ಯಾಸಕಿ ಗಂಗಾರತ್ನ ಮುಗುಳಿ ಸ್ವಾಗತಿಸಿ, ವಂದಿಸಿದರು.