ಅನಾಸಕ್ತಿ ವೇದಾಧ್ಯಯನ ಹಿಂದುಳಿಯುವಿಕೆಗೆ ಕಾರಣ -ಶ್ರೀ ಭೀಮೇಶ್ವರ ಜೋಶಿ

ವೇದಾಧ್ಯನದ ಹಿಂದುಳಿಯುವಿಕೆಗೆ ಜನರಿಗಿರುವ ಅನಾಸಕ್ತಿಯೇ ಕಾರಣವೇ ಹೊರತು ವ್ಯವಸ್ಥೆಯ ಕೊರತೆ ಅಲ್ಲ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಶಿಯವರು ನುಡಿದರು. ಶ್ರೀ ಭಾರತೀ ಕಾಲೇಜಿನಲ್ಲಿ ಶ್ರೀ ವೇದ ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರದ ವೇದ ವಿದ್ಯಾ ಡಿಪ್ಲೊಮಾ ಕೋರ್ಸ್‌ನ್ನು ದಿನಾಂಕ ೦೪.೦೮.೨೦೧೨ರಂದು ಉದ್ಘಾಟಿಸಿ ಮಾತನಾಡುತ್ತಾ ಇದು ಯಾವುದೇ ಒಂದು ಮತಕ್ಕೆ ಸೀಮಿತವಾಗದೆ ಭಾರತದಾದ್ಯಂತ ಎಲ್ಲೆಡೆ ಕಂಡು ಬರುತ್ತಿದೆ ಎಂದರು.

ಆಳವಾದ ವೇದಾಧ್ಯಯನ ಮಾಡುವಲ್ಲಿ ಜನರಿಗಿರುವ ಅನಾಸಕ್ತಿಯನ್ನು ಕುರಿತು ಅಸಾಮಾಧಾನ ವ್ಯಕ್ತಪಡಿಸಿದ ಅವರು ಎಲ್ಲಾ ಅನುಕೂಲಕರ ವ್ಯವಸ್ಥೆಗಳನ್ನು ಕಲ್ಪಿಸಿದಾಗಲೂ ಹೊರನಾಡಿನಲ್ಲಿ ತಾವು ನಡೆಸುತ್ತಿರುವ ಸಂಸ್ಥೆಯಲ್ಲಿ ವೇದಾಧ್ಯಯನ ಮಾಡಲು ಉತ್ತಮ ವಿದ್ಯಾರ್ಥಿಗಳ ಕೊರತೆ ಇದೆ ಎಂದರು.  ವೇದ ಕಲಿಕೆಯು ಕಷ್ಟಕರವೆಂಬ ಭಾವನೆಯು ಜನಸಾಮಾನ್ಯರಿಗಿದ್ದು ವಸ್ತುತಃ ವೇದಾಧ್ಯಯನ ಮತ್ತು ವೇದದ ಅರ್ಥಗ್ರಹಣ ಸುಲಭ ಎಂದರು. ವೇದವನ್ನು ಅರ್ಥೈಸುವುದೆಂದರೆ ತನ್ನನ್ನು ತಾನೆ ಅರ್ಥೈಸಿಕೊಂಡಂತೆ ಎಂದ ಅವರು ವೇದ ವಿದ್ಯಾ ಡಿಪ್ಲೊಮಾ ಕೋರ್ಸನ್ನು ಆರಂಭಿಸಿರುವುದಕ್ಕಾಗಿ ಶ್ರೀ ಭಾರತೀ ಕಾಲೇಜನ್ನು ಅಭಿನಂದಿಸಿ ಈ ರೀತಿಯ ಕೋರ್ಸ್‌ಗಳಿಂದ ಸಂಸ್ಕೃತ ಭಾಷೆಯಲ್ಲಿರುವ ವೇದದ ಸ್ಪಷ್ಟ ಉಚ್ಛಾರಣೆ ಸಾಧ್ಯವೆಂದರು.

ಶ್ರೀ ಭಾರತೀ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎನ್. ಭಟ್ಟರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ಡಿಪ್ಲೋಮಾ ಇನ್ ವೇದಿಕ್ ಹೆರಿಟೇಜ್ ಆಂಡ್ ಕಲ್ಚರ್ ಎಂಬ ಆರು ತಿಂಗಳ ಕೋರ್ಸ್‌ನ್ನು ಈ ತನಕ ಯಾವುದೇ ವಿಶ್ವವಿದ್ಯಾನಿಲಯವು ಆರಂಭಿಸಿಲ್ಲ ಎಂದರು.  ಎಸ್‌ಎಸ್‌ಎಲ್‌ಸಿ ಪಾಸಾದ ಎಲ್ಲರೂ ಈ ಕೋರ್ಸಿಗೆ ಅರ್ಹರಾಗಿದ್ದು ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ಕೋರ್ಸಿನ ತರಗತಿಗಳು ಪ್ರತಿ ಶನಿವಾರ ಮಧ್ಯಾಹ್ನ ೨ ರಿಂದ ೫ ಗಂಟೆಯವರೆಗೆ ಮತ್ತು ಪ್ರತಿ ಭಾನುವಾರ ಬೆಳಗ್ಗೆ ೯.೩೦ ರಿಂದ ಸಂಜೆ ೪.೩೦ರವರೆಗೆ ನಡೆಯಲಿದ್ದು ಭೋದನೆ ಕನ್ನಡ ಮಾಧ್ಯಮದಲ್ಲಿರುತ್ತದೆ ಎಂದರು.

ಕಾರ್ಯಕ್ರಮವನ್ನು ಶ್ರೀ ಉಮಾಮಹೇಶ್ವರ ಇವರ ವೇದ ಘೋಷ ಮತ್ತು ಶ್ರೀಮತಿ ಭಾರತಿ ನೀಲಕಂಠ ಇವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಶ್ರೀ ಮರುವಳ ನಾರಾಯಣ ಭಟ್ ವಂದಿಸಿದರು. ಡಾ. ಈಶ್ವರ ಪ್ರಸಾದ್ ಇವರು ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin