ಶ್ರೀ ಭಾರತೀ ಕಾಲೇಜು-ಒಂದು ಅವಲೋಕನ

ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಕೃಪಾಶೀರ್ವಾದಗಳೊಂದಿಗೆ ನಡೆಯುತ್ತಿರುವ ಶ್ರೀ ಭಾರತೀ ಕಾಲೇಜು, ಶ್ರೀಮಠದ ಧರ್ಮಚಕ್ರ ಟ್ರಸ್ಟ್‌ನ ಆಡಳಿತಕ್ಕೆ ಒಳಪಟ್ಟಿದ್ದು, ಸ್ಥಳೀಯವಾಗಿ ಶ್ರೀ ಭಾರತೀ ಸಮೂಹಸಂಸ್ಥೆಯು ಆಡಳಿತವನ್ನು ನಿರ್ವಹಿಸುತ್ತಿದೆ. 2001ರ ಜುಲೈ 2ರಂದು ಪೂಜ್ಯ ಶ್ರೀಗಳ ಅಮೃತಹಸ್ತದಿಂದ ಉದ್ಘಾಟನೆಗೊಂಡ ಕಾಲೇಜು, ಇದೀಗ ದಶಮಾನೋತ್ಸವದ ಹೊಸ್ತಿಲಿನಲ್ಲಿ ಸಂಭ್ರಮದಿಂದ ನಿಂತಿದೆ.

2001-02ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪೂಜ್ಯ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ‘ಶ್ರೀ ಭಾರತೀ ಅನ್ವಯಿಕ ವಿಜ್ಞಾನ ಮಹಾವಿದ್ಯಾಲಯ’ (Shree Bharathi Institute of Applied Sciences) ಎಂಬ ಹೆಸರಿನಲ್ಲಿ ಬಿಸಿಎ ಕೋರ್ಸ್‌ನೊಂದಿಗೆ ವಿದ್ಯಾಲಯವು ಆರಂಭಗೊಂಡಿತು. ನಂತರ 2003-04ನೇ ಸಾಲಿನ ಶೈಕ್ಷಣಿಕ ವರ್ಷದಿಂದ ‘ಶ್ರೀ ಭಾರತೀ ಕಾಲೇಜು’ ಎನ್ನುವ ಹೆಸರಿನೊಂದಿಗೆ ಇದೀಗ ಯಶಸ್ವಿಯಾಗಿ ಮುಂದುವರಿಯುತ್ತಿದೆ.  ಭಾರತೀಯ ಪರಂಪರೆ ಹಾಗೂ ಮೌಲ್ಯಗಳಿಗೆ ಒತ್ತುಕೊಟ್ಟು ಉತ್ತಮ ಗುಣಮಟ್ಟದ ಆಧುನಿಕ ಶಿಕ್ಷಣವನ್ನು ನೀಡುವ ಉದ್ದೇಶದೊಂದಿಗೆ, ಆರಂಭಗೊಂಡ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಮೂಲಕ ಅನನ್ಯ ಸಾಧನೆಗೈಯುವ ಗುರಿಯನ್ನು ಹೊಂದಿದೆ.

ಪ್ರಾರಂಭದ ಆರೇಳು ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಂಯೋಜನೆ ಹೊಂದಿ ಬಿಸಿಎ ಕೋರ್ಸನ್ನು ಮಾತ್ರ ಇಲ್ಲಿ ನಡೆಸಲಾಗುತ್ತಿತ್ತು. ಆದರೂ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜು ಶೈಕ್ಷಣಿಕವಾಗಿ ಪ್ರಗತಿಸಾಧಿಸುವುದರೊಂದಿಗೆ, ವಿದ್ಯಾರ್ಥಿಗಳು ವೈಯಕ್ತಿಕವಾಗಿ ಸುಸಂಸ್ಕೃತರಾಗುತ್ತಾ ಉದ್ಯೋಗ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಮೊದಲಿಗೆ ಕೇವಲ 11 ಮಂದಿ ವಿದ್ಯಾರ್ಥಿಗಳೊಂದಿಗೆ ಬಿಸಿಎ ಪದವಿ ತರಗತಿ ಆರಂಭವಾಯಿತಾದರೂ ಶಿಕ್ಷಣ ಕ್ಷೇತ್ರದಲ್ಲಿ ತನ್ನ ಮಹತ್ವವನ್ನು ತೋರಿಸಿದ ಈ ಕಾಲೇಜಿನಲ್ಲಿ ಮುಂದೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳ ಕಂಡುಬಂದಿತು. ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಬಿಸಿಎಗೆ ಸೇರಿದಾಗ ಎರಡು ವಿಭಾಗಗಳಲ್ಲಿ ತರಗತಿಗಳು ಯಶಸ್ವಿಯಾಗಿ ನಡೆಯತೊಡಗಿದ್ದವು. ಈ ಕಾಲೇಜಿಗೆ ದಕ್ಷಿಣಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೆ ಉತ್ತರಕನ್ನಡ, ಶಿವಮೊಗ್ಗ, ಕಾಸರಗೋಡು ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಬಂದು ಪದವಿ ಪಡೆದಿದ್ದಾರೆ. ಇಲ್ಲಿ ಆಧುನಿಕ ಶಿಕ್ಷಣದೊಡನೆ ಭಾರತೀಯ ಪರಂಪರೆ, ಮೌಲ್ಯಗಳನ್ನು ಆಧರಿಸಿದ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದರಿಂದ ದೂರದ ಊರಿನ ವಿದ್ಯಾರ್ಥಿಗಳು ಈಗಲೂ ಇಲ್ಲಿಗೆ ಬರುತ್ತಿದ್ದಾರೆ. ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್‌ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್ ಸೌಲಭ್ಯ ದೊರೆಯುವುದರೊಂದಿಗೆ ಉತ್ತಮ ಗ್ರಂಥಾಲಯವು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ವಿನಾಯಿತಿ ಹಾಗೂ ಶೇಕಡಾ ೮೫ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾಥಿಗಳಿಗೆ ಬೋಧನಾ ಶುಲ್ಕವನ್ನು ಮನ್ನಾ ಮಾಡಲಾಗುತ್ತಿತ್ತು; ಈಗಲೂ ಮಾಡಲಾಗುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಪ್ರಗತಿಯ ಪಥದಲ್ಲಿ ನಡೆಯುತ್ತಾ ಬಂದ ಶ್ರೀ ಭಾರತೀ ಕಾಲೇಜು ಆರಂಭದ ವರ್ಷಗಳಿಂದಲೂ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತಾ ಬಂದಿದೆ. ಸೌಜನ್ಯಾ ಎಸ್.ಭಟ್, ಮಧುರಲಕ್ಷ್ಮೀ, ದೀಪಾ ಇವರು ರ್‍ಯಾಂಕ್ ಗಳಿಸಿದ್ದರೆ, ಶ್ರೀಕೃಷ್ಣ ಭಟ್, ಶಿಲ್ಪಾ, ಅಶ್ವಿನಿ, ಪ್ರಿಯದರ್ಶಿನಿ ಇವರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿದವರು. ಇನ್ನುಳಿದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ ಕಾಲೇಜಿನ ಕೀರ್ತಿಯನ್ನು ಉನ್ನತ ಶಿಖರಕ್ಕೇರಿಸಿದ್ದಾರೆ. ಮುಂದೆ ಶೈಕ್ಷಣಿಕವಾಗಿ ಸೌಲಭ್ಯಗಳನ್ನು ಹೆಚ್ಚಿಸುತ್ತಾ, ಕಾರ್ಯಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿಟ್ಟುಕೊಂಡ ಈ ಶಿಕ್ಷಣ ಸಂಸ್ಥೆಯಲ್ಲಿ ಇರುವ ಸೌಲಭ್ಯಗಳನ್ನು ಪರಿಗಣಿಸಿ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ೨೦೦೮-೦೯ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಿಬಿಎಂ ಕೋರ್ಸ್ ಮತ್ತು ೨೦೧೦-೧೧ನೇ ಶೈಕ್ಷಣಿಕ ವರ್ಷದಲ್ಲಿ ಬಿ.ಕಾಂ ಕೋರ್ಸ್‌ಗಳು ಆರಂಭಗೊಂಡವು. ಆಡಳಿತ ಮಂಡಳಿಯ ಪ್ರೋತ್ಸಾಹ, ಬೋಧಕವೃಂದದ ಉತ್ಸಾಹ, ಛಲ, ವಿದ್ಯಾರ್ಥಿಗಳ ಪ್ರಯತ್ನಗಳಿಂದ ಸ್ಪರ್ಧಾತ್ಮಕ ಯುಗದಲ್ಲಿಯೂ ವಿದ್ಯಾರ್ಥಿಗಳಿಗೆ ಇಲ್ಲಿ ಮೌಲಿಕ ಶಿಕ್ಷಣ ದೊರೆತಿದೆ-ದೊರೆಯುತ್ತಿದೆ. ಹೀಗೆ ಸಂಸ್ಥೆಯ ಒಟ್ಟು ಶೈಕ್ಷಣಿಕ ಗುಣಮಟ್ಟ ಹೆಚ್ಚಾದುದರ ಫಲವಾಗಿ ನಿರಂತರ ಉತ್ತಮ ಫಲಿತಾಂಶವನ್ನು ನೀಡುತ್ತಾ ಬಂದ ಹಿರಿಮೆ-ಗರಿಮೆ ಶ್ರೀ ಭಾರತೀ ಕಾಲೇಜಿನದಾಗಿದೆ.

ಕಾಲೇಜು ಆರಂಭಗೊಂಡಂದಿನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ವಿವಿಧ ರೀತಿಯ ಮಾಹಿತಿ-ತರಬೇತಿ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರಗಳು ನಡೆಯುತ್ತಾ ಬಂದಿವೆ. ನೈತಿಕ ಮೌಲ್ಯಗಳ ತಳಹದಿಯಲ್ಲಿ ಆಧುನಿಕ ಶಿಕ್ಷಣ ನೀಡಬೇಕೆನ್ನುವ ಧ್ಯೇಯ-ಧೋರಣೆ ಈ ಶಿಕ್ಷಣ ಸಂಸ್ಥೆಯದು. ಈ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳು ಇಲ್ಲಿ ನಡೆದಿವೆ. ಕಾಲೇಜು ಆರಂಭಗೊಂಡ ವರ್ಷದಲ್ಲಿಯೇ ‘ವೇದ-ವಿಜ್ಞಾನ-ತಂತ್ರಜ್ಞಾನ ಒಂದು ಚಿಂತನೆ’ ಎನ್ನುವ ವಿಶೇಷ ಕಾರ್ಯಕ್ರಮ ನಡೆದು ಇವುಗಳ ಸಮನ್ವಯವಾಗಿರುವ ಇಲ್ಲಿನ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟಿದೆ. ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮತ್ತು ಟೆಕ್ನಿಕಲ್ ಮ್ಯೂಸಿಯಂ, ಬೆಂಗಳೂರು ಹಾಗೂ ಜಿಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ-ಇವರ ಸಹಯೋಗದೊಂದಿಗೆ 2002 ಜನವರಿ 4ರಿಂದ 6ರವರೆಗೆ ‘ವಲಯ ಮಟ್ಟದ ಕಂಪ್ಯೂಟರ್ ಫೇರ್-2002’ನ್ನು ನಡೆಸಲಾಯಿತು. ಅದೇ ರೀತಿಯಲ್ಲಿ 2003 ಜನವರಿ 10ರಿಂದ 12ರವರೆಗೆ ‘ವಲಯ ಮಟ್ಟದ ಕಂಪ್ಯೂಟರ್ ಫೇರ್-2003’ ಹಾಗೂ 2004 ಜನವರಿ 7ರಿಂದ 9ರವರೆಗೆ ‘ವಲಯ ಮಟ್ಟದ ಕಂಪ್ಯೂಟರ್ ಫೇರ್-2004’ ಇವುಗಳನ್ನು ನಡೆಸಲಾಯಿತು. ಜೀವನದ ಸವಾಲು-ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಲು ಮೌಲ್ಯಯುತ ಶಿಕ್ಷಣ ಕೌಶಲ್ಯದ ಅಗತ್ಯವಿರುವಂತೆ ಶೈಕ್ಷಣಿಕ ಪ್ರಗತಿಗೆ ಹಾಗೂ ಉದ್ಯೋಗ ಕ್ಷೇತ್ರದ ಸ್ಪರ್ಧೆಗಳನ್ನೆದುರಿಸಲು ಅಗತ್ಯವಾದ ಮಾಹಿತಿ-ತರಬೇತಿ ಕಾರ್ಯಕ್ರಮಗಳು, ಉದ್ಯೋಗಾಧಾರಿತ ಕೋರ್ಸ್‌ಗಳಾದ ಹಾರ್ಡ್‌ವೇರ್ ನೆಟ್‌ವರ್ಕಿಂಗ್, ಅಂತರರಾಷ್ಟ್ರೀಯ ಅಕೌಂಟಿಂಗ್ ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡಾ ಕಾಲೇಜಿನಲ್ಲಿ ನಡೆಸಲಾಗಿತ್ತು.

2006ನೇ ಮತ್ತು 2007ನೇ ಶೈಕ್ಷಣಿಕ ವರ್ಷಗಳಲ್ಲಿ ಶ್ರೀ ರವಿಶಂಕರ ಗುರೂಜಿಯವರ ‘ಜೀವನಕಲೆ’ ಶಿಬಿರವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿತ್ತು. ಜೀವನ ಸುಂದರವೂ, ಆನಂದಮಯವೂ, ಉದ್ವೇಗರಹಿತವೂ ಆಗಿರಲು ಶೈಕ್ಷಣಿಕ ಮಟ್ಟದಲ್ಲಿ ಮಾಹಿತಿ ನೀಡಿ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವಾಗಿ ಇಂತಹ ಮಾಹಿತಿ ಶಿಬಿರಗಳನ್ನು ನಡೆಸಲಾಯಿತು. ಈ ಮದ್ಯೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾಜೆಕ್ಟ್ ಬಗ್ಗೆ ಮಾರ್ಗದರ್ಶನ ಮಾತ್ರವಲ್ಲದೆ ಸಾರ್ವಜನಿಕರಿಗಾಗಿ ‘ಕಂಪ್ಯೂಟರ್ ಬೇಸಿಕ್ಸ್ ಮತ್ತು ಇನ್‌ವೆಸ್ಟ್‌ಮೆಂಟ್ ಕೋರ್ಸ್’ ಇವುಗಳನ್ನು ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಮಾಹಿತಿ, ಮಾರ್ಗದರ್ಶನ ಹಾಗೂ ಸಾರ್ವಜನಿಕ ವಲಯದಲ್ಲಿ ಕಾಲೇಜು, ತನ್ನ ಶೈಕ್ಷಣಿಕ ಪ್ರಗತಿಯನ್ನು ಪರಿಚಯಿಸಿಕೊಳ್ಳುವಲ್ಲಿ ಕೈಗೊಂಡ ಮಹತ್ವದ ಹೆಜ್ಜೆಯಾಗಿ ಇದು ಕಂಡುಬರುತ್ತದೆ. ಇಷ್ಟು ಮಾತ್ರವಲ್ಲದೇ ಸಂಸ್ಕೃತ ಸಂಭಾಷಣಾ ಶಿಬಿರ, ಸ್ಪಿಕ್‌ಮೆಕೆ ಇವರಿಂದ ಸಂಗೀತ ನೃತ್ಯ ಕಾರ್ಯಕ್ರಮಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಉಪನ್ಯಾಸಕರಿಗೆ ಬೋಧನಾ ತರಬೇತಿ ಶಿಬಿರ, ಶ್ರೀ ಗುರುಗಳಿಂದ ಸಂಕ್ಷೇಪ ರಾಮಾಯಣ ಪ್ರವಚನ, ಶ್ರೀಧರ ಸ್ವಾಮಿಗಳ ಜಯಂತಿ ಆಚರಣೆ ಹೀಗೆ ಹತ್ತು ಹಲವು ಕಾರ್ಯ ಚಟುವಟಿಕೆಗಳು ನಡೆಯುತ್ತಾ ಬಂದಿವೆ.

ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಮೂಲಭೂತ ಸೌಕರ್ಯಗಳನ್ನು ಕೂಡಾ ಒದಗಿಸಿಕೊಡುವ ಅಗತ್ಯ ಕಂಡುಬರುತ್ತದೆ. ಕಾಲೇಜು ಸ್ವ-ಆರ್ಥಿಕ ನೆಲೆಯಿಂದಲೇ ಬೆಳೆಯಬೇಕು-ಬೆಳಗಬೇಕು ಎನ್ನುವ ಆಶಯದಿಂದ ಕಾಲೇಜಿಗಾಗಿ ಸ್ವಂತ ಕಟ್ಟಡ ನಿರ್ಮಾಣಗೊಂಡಿತು. ನಾಲ್ಕು ಅಂತಸ್ತುಗಳ ಈ ನೂತನ ಕಟ್ಟಡ 2010, ಏಪ್ರಿಲ್ ೪ರಂದು ಶ್ರೀಗುರುಗಳ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.

ಪರಮಪೂಜ್ಯ ಶ್ರೀಗಳ ಪೂರ್ಣಾನುಗ್ರಹದೊಂದಿಗೆ ಕಾಲೇಜು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, 2012 ಜೂನ್ 23ರಂದು ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳನ್ನೊಳಗೊಂಡ ‘ಶ್ರೀ ಭಾರತೀ ಪದವಿ ಪೂರ್ವ ಕಾಲೇಜು’ ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. 2011ರಲ್ಲಿ ಶ್ರೀ ಸದಾನಂದ ಸರಸ್ವತಿ ಆಂಗ್ಲಮಾಧ್ಯಮ ಪ್ರೌಢಶಾಲೆಯೂ ಶ್ರೀ ಭಾರತೀ ಸಮೂಹ ಸಂಸ್ಥೆಯ ಆಡಳಿತಕ್ಕೊಳಪಟ್ಟಿದೆ. ಇವೆಲ್ಲವುಗಳ ಜೊತೆಗೆ ಶ್ರೀ ಭಾರತೀ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕಾಗಿ ‘ವೇದವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರ’ವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಇಲ್ಲಿ ‘ವೇದವಿದ್ಯಾ ಡಿಪ್ಲೋಮಾ ಕೋರ್ಸ್’ ಆರಂಭಗೊಂಡಿದೆ. ಸಾಂಪ್ರದಾಯಿಕ ಹಾಗೂ ಆಧುನಿಕ ಪದ್ಧತಿಯಲ್ಲಿ ವೇದ-ಸಂಸ್ಕೃತ-ಸಂಸ್ಕಾರ ಕುರಿತು ಪಾಠ-ಪ್ರವಚನ ಹಾಗೂ ಅಂತರ್‌ವಿಷಯದ ಸಂಶೋಧನೆ ನಡೆಯುತ್ತಿದೆ.

2012-13ನೇ ಸಾಲಿನ ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಮತ್ತಷ್ಟು ತರಬೇತಿ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಸಾಹಿತ್ಯ-ಸಾಂಸ್ಕೃತಿಕ ಸ್ಪರ್ಧೆಗಳು ವಿನೂತನವಾಗಿ ನಡೆಯುತ್ತಿವೆ. ಸನಾತನ ಮೌಲ್ಯಶಿಕ್ಷಣದ ಅಡಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಮಂಗಳೂರು ಮಹಾನಗರ ಮಟ್ಟದಲ್ಲಿ ಪದವಿ, ಪದವಿಪೂರ್ವ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಕಂಠಪಾಠ ಸ್ಪರ್ಧೆ, ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಅಂತರ್‌ಕಾಲೇಜು ಸ್ಪರ್ಧೆಗಳು, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಶ್ರೀ ಭಾರತೀ ಸಂಸ್ಕೃತೋತ್ಸವ, ಸಂಪನ್ಮೂಲವ್ಯಕ್ತಿಗಳಿಂದ ಮಹಿಳಾ ಜಾಗೃತಿ ಕಾರ್ಯಕ್ರಮ, ವಾಣಿಜ್ಯ ವಿಷಯಗಳ ಕುರಿತು ಮಾಹಿತಿ ಕಾರ್ಯಕ್ರಮ, ಸಂಗೀತ ಮತ್ತು ಯುಕ್ಷಗಾನ ತರಬೇತಿ ಕಾರ್ಯಕ್ರಮಗಳು, ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ, ದಶಮಾನೋತ್ಸವ ವಿಶೇಷ ಕಾರ್ಯಕ್ರಮವಾಗಿ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು, ಹದಿನೈದಕ್ಕಿಂತಲೂ ಹೆಚ್ಚು ವಿವಿಧ ರೀತಿಯ ಸಾಹಿತ್ಯ-ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿವೆ. ಕಾಲೇಜಿನ ಹಲವು ವಿದ್ಯಾರ್ಥಿಗಳು, ಇತರ ಕಾಲೇಜುಗಳಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೇರಣೆಯಂತೆ ಶ್ರೀ ಭಾರತೀ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆಧುನಿಕ ವೃತ್ತಿ, ಪ್ರವೃತ್ತಿಯಲ್ಲಿರುವವರಿಗೆ ಸದವಕಾಶ ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೂ ವೇದ-ಸಂಸ್ಕಾರಗಳ ಅಧ್ಯಯನವಾಗಬೇಕೆಂಬುದೂ ಸದುದ್ದೇಶ. ಮಾತ್ರವಲ್ಲ, ಉನ್ನತ ಅಧ್ಯಯನ ಹಾಗೂ ಸಂಶೋಧನಕ್ಕೂ ಅವಕಾಶವಿರಬೇಕು ಎಂಬ ಹೆಬ್ಬಯಕೆಯೊಂದಿಗೆ ಈ ವೇದ-ವಿದ್ಯಾ ಸಂಸ್ಕಾರ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಶ್ರೀ ರಾಮಚಂದ್ರಾಪುರ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೇರಣೆಯಂತೆ ದಿನಾಂಕ 20.04.2012ರಂದು ಉದ್ಘಾಟಿಸಲ್ಪಟ್ಟಿತು.
ಈ ಕೇಂದ್ರದ ಅಧೀನದಲ್ಲಿ ವೇದ-ವಿದ್ಯಾ ಡಿಪ್ಲೋಮಾ ಕೋರ್ಸ್‌ನ್ನು ದಿನಾಂಕ 04.08.2012ರಂದು ಆರಂಭಿಸಲಾಗಿದೆ. ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವರು ವೇದ-ವಿದ್ಯಾ ಡಿಪ್ಲೋಮಾ ಕೋರ್ಸ್‌ನ್ನು ಉದ್ಘಾಟಿಸಿ ಮಾತನಾಡುತ್ತಾ ವೇದಾಧ್ಯನದ ಹಿಂದುಳಿಯುವಿಕೆಗೆ ಜನರಿಗಿರುವ ಅನಾಸಕ್ತಿಯೇ ಕಾರಣವೇ ಹೊರತು ವ್ಯವಸ್ಥೆಯ ಕೊರತೆ ಅಲ್ಲ ಎಂದರು. ವೇದವನ್ನು ಅರ್ಥೈಸುವುದೆಂದರೆ ತನ್ನನ್ನು ತಾನೆ ಅರ್ಥೈಸಿಕೊಂಡಂತೆ ಎಂದ ಅವರು ವೇದ ವಿದ್ಯಾ ಡಿಪ್ಲೊಮಾ ಕೋರ್ಸನ್ನು ಆರಂಭಿಸಿರುವುದಕ್ಕಾಗಿ ಶ್ರೀ ಭಾರತೀ ಕಾಲೇಜನ್ನು ಅಭಿನಂದಿಸಿ ಈ ರೀತಿಯ ಕೋರ್ಸ್‌ಗಳಿಂದ ಸಂಸ್ಕೃತ ಭಾಷೆಯಲ್ಲಿರುವ ವೇದದ ಸ್ಪಷ್ಟ ಉಚ್ಛಾರಣೆ ಸಾಧ್ಯವೆಂದರು. ಈ ಡಿಪ್ಲೋಮಾ ಕೋರ್ಸಿನ ಕುರಿತು ವ್ಯಾಪಕವಾಗಿ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕರ್ನಾಟಕದ ಶಿವಮೊಗ್ಗ, ಮೈಸೂರು, ಮೊದಲಾದ ಕಡೆಗಳಿಂದ ಇಂತಹ ಕೋರ್ಸ್ ಆರಂಭಿಸುವಂತೆ ಕೋರಿಕೆಗಳು ಕೂಡಾ ಬಂದಿರುವುದು ನಮ್ಮ ಇಂದಿನ ಜನರಿಗೆ ಇಂತಹ ವಿಚಾರಗಳಲ್ಲಿ ಇರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ. ಆರಂಭದಲ್ಲಿ ಗರಿಷ್ಠ ಹದಿನೈದು ವಿದ್ಯಾರ್ಥಿಗಳನ್ನು ಹೊಂದುವ ಅಪೇಕ್ಷೆ ಇಟ್ಟುಕೊಂಡು ಆರಂಭಿಸಲಾಗಿದ್ದ ಈ ಕೋರ್ಸಿನ ಪ್ರಯೋಜನವನ್ನು 35 ವರ್ಷದಿಂದ 72 ವಯಸ್ಸಿನ ವಯೋಮಾನದ 43 ವಿದ್ಯಾರ್ಥಿಗಳು ಪಡೆದುಕೊಂಡರು.

ಸಂಸ್ಥೆಯು ಸಮರ್ಥ ಮತ್ತು ಅನುಭವಿ ಶಿಕ್ಷಕವೃಂದವನ್ನು ಹೊಂದಿದೆ. ಶಿಕ್ಷಕರಿಂದ ಸರಿಯಾದ ಮಾರ್ಗದರ್ಶನ, ವೈಯಕ್ತಿಕ ಗಮನ-ಪರಿಶೀಲನೆಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ಸಹಕಾರಿಗಳಾಗಿವೆ. ಹಾಗೆಯೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹವರ್ತಿ ಪೋಷಕರಾಗಿ ನಿಲ್ಲುವ ಉದ್ದೇಶದಿಂದ ಈ ವರ್ಷ ಕಾಲೇಜಿನಲ್ಲಿ ‘ರಕ್ಷಕ-ಶಿಕ್ಷಕ ಸಂಘ’ವನ್ನು ಸ್ಥಾಪಿಸಲಾಗಿದೆ. ಶಿಕ್ಷಕರು ಮತ್ತು ಪೋಷಕರ ಮಧ್ಯೆ ಉತ್ತಮವಾದ ಸಂವಹನ, ಸೌಹಾರ್ದಯುತ ಸಂಬಂಧ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಗಿದೆ.

ಶ್ರೀ ಭಾರತೀ ಕಾಲೇಜಿನ ಆವರಣದಲ್ಲಿ, ಹಿಂದೆ ಶ್ರೀಧರಸ್ವಾಮಿಗಳು ಚಾತುರ್ಮಾಸ್ಯ ವ್ರತವನ್ನು ಆಚರಿಸಿರುವ ಹಿನ್ನಲೆಯಲ್ಲಿ ಶಾಲಾ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಪ್ರತಿ ಗುರುವಾರ ಶ್ರೀ ಗುರು ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಗುರುಕುಲದ ಪರಿಸರವನ್ನು ಅನುಭವಕ್ಕೆ ತರುವಂತಹ ಕಾಲೇಜಿನ ಆವರಣದಲ್ಲಿ 62 ವಿವಿಧ ರೀತಿಯ ಸಸ್ಯ ವೈವಿಧ್ಯಗಳಿವೆ. ಇದೀಗ ಈ ಆವರಣದಲ್ಲಿ ‘ನವಗ್ರಹವನ’ ಮತ್ತು ‘ನಾಗಬನ’ಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರಪ್ರಜ್ಞೆ ಮೂಡಿಸುವುದರೊಂದಿಗೆ ಪರಂಪರೆಯಿಂದ ಬಂದ ನಂಬಿಕೆಗಳಿಗೆ ಧಕ್ಕೆಯುಂಟಾಗದಂತೆ ಸಂಸ್ಕೃತಿ-ಮೌಲ್ಯಗಳನ್ನು ಕಾಪಾಡಿಕೊಂಡು ಬರುವ ಗುರುತರ ಜವಾಬ್ದಾರಿಯನ್ನು  ಹೊತ್ತಿರುವ ಶಿಕ್ಷಣ ಸಂಸ್ಥೆ ಇದಾಗಿದೆ.

ಸ್ವಸ್ಥ-ಸುಂದರ ಸಮಾಜ ನಿರ್ಮಾಣದ, ಶ್ರೀ ಗುರುಗಳ ಕನಸನ್ನು ಸಾಕಾರಗೊಳಿಸುವ ಮಹದುದ್ದೇಶವನ್ನು ಹೊಂದಿದ ಈ ಶಿಕ್ಷಣ ಸಂಸ್ಥೆ ಮಂಗಳೂರು ಮಹಾನಗರದ ನಂತೂರಿನ ಪ್ರಶಾಂತವಾದ ಪರಿಸರದಲ್ಲಿ, ಸಮೃದ್ಧವಾದ ಹಸಿರಿನ ಮಧ್ಯೆ ತಲೆಯೆತ್ತಿ ನಿಂತಿದೆ. ನಾಲ್ಕು ಅಂತಸ್ತುಗಳನ್ನು ಹೊಂದಿದ ಪದವಿ ಕಾಲೇಜು ಮೇಲ್ಭಾಗದಲ್ಲಿ ವಿಶಾಲವಾದ ಸಭಾಂಗಣವನ್ನು ಒಳಗೊಂಡಿದೆ. ಸ್ವಚ್ಛವಾದ ಗಾಳಿ-ಬೆಳಕುಗಳಿಂದ ಕೂಡಿದ ವಿಶಾಲವಾದ ಕೊಠಡಿಗಳು, ಸುಸಜ್ಜಿತವಾದ ಪ್ರಯೋಗಾಲಯ ಮತ್ತು ಗ್ರಂಥಾಲಯಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಲಭ್ಯ, ಊಟ-ಉಪಾಹಾರಗಳಿಗಾಗಿ ಕ್ಯಾಂಟೀನ್ ಇತ್ಯಾದಿ ವ್ಯವಸ್ಥೆಗಳನ್ನು ಹೊಂದಿದ ಶ್ರೀ ಭಾರತೀ ಕಾಲೇಜು ಒಂದು ಪರಿಪೂರ್ಣ ಶಿಕ್ಷಣ ಸಂಸ್ಥೆಯೆನಿಸಿದೆ.

ಶ್ರೀ ಗುರುಗಳ ಆಶೀರ್ವಾದದಿಂದ ಸಹೃದಯ ಸಮಾಜ ಬಾಂಧವರ ಬೆಂಬಲದೊಂದಿಗೆ ಬೆಳೆಯುತ್ತಾ ಸತತ ಕ್ರಿಯಾಶೀಲತೆಯಿಂದ ಕೂಡಿದ ಶ್ರೀ ಭಾರತೀ ಕಾಲೇಜು, ಸಂಸ್ಕೃತಿ ಸಂಪನ್ನರಾದ, ಅಪ್ರತಿಮ ಸಾಮರ್ಥ್ಯದಿಂದ ಕೂಡಿದ ಪ್ರಜಾನಿರ್ಮಾಣದ ದಾರಿಯಲ್ಲಿ ಸಾಗುತ್ತಾ ಪರಮಪೂಜ್ಯರ ಕನಸನ್ನು ಸಾಕಾರಗೊಳಿಸುವ ಸಂಕಲ್ಪಬದ್ಧ ಸಂಸ್ಥೆಯಾಗಿದೆ. ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರುವ ಈ ಸಂಸ್ಥೆಯ ಕೀರ್ತಿ ಗಗನದೆತ್ತರಕ್ಕೆ ಪಸರಿಸಲಿ ಎನ್ನುವ ಹಾರೈಕೆ ನಮ್ಮೆಲ್ಲರದು.

Highslide for Wordpress Plugin