ನಮ್ಮ ಸಂಸ್ಕೃತಿಯಲ್ಲಿ ರಾಮಾಯಣ ಹಾಸುಹೊಕ್ಕಾಗಿದೆ. – ಡಾ. ಲಕ್ಷ್ಮಿನಾರಾಯಣ ಆಳ್ವ

ದಶಮಾನೋತ್ಸವ ವಿಶೇಷ ಕಾರ್ಯಕ್ರಮ – ಐದು ವಿಚಾರ ಗೋಷ್ಠಿ ಸರಣಿಯ ಉದ್ಘಾಟನೆ

ಮಂಗಳೂರಿನ ನಂತೂರಿನಲ್ಲಿರುವ ಶ್ರೀ ಭಾರತೀ ಕಾಲೇಜಿನಲ್ಲಿ ಆರ್ಷವಿದ್ಯೆಯ ಅಧ್ಯಯನಕ್ಕೆ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರವನ್ನು ಸ್ಥಾಪಿಸಲಾಗಿದ್ದು ವೃತ್ತಿ, ಪ್ರವೃತ್ತಿಯಲ್ಲಿರುವವರಿಗೆ ಭಾರತೀಯ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡುವ ಉದ್ದೇಶದಿಂದ ವೇದ-ವಿದ್ಯಾ ಸಂಸ್ಕಾರ ಸಂಶೋಧನ ಸಂಶೋಧನಾ ಕೇಂದ್ರವು ದಶಮಾನೋತ್ಸವ ವಿಶೇಷ ಕಾರ್ಯಕ್ರಮವಾಗಿ ರಾಮಾಯಣ, ಮಹಾಭಾರತ, ಪುರಾಣಗಳು, ಧರ್ಮಶಾಸ್ತ್ರ ಮತ್ತು ವೇದಾಂತ ವಿಷಯದ ಮೇಲೆ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು ಅದರ ಉದ್ಘಾಟನಾ ಭಾಷಣದಲ್ಲಿ ದಿನಾಂಕ ೮.೧೨.೨೦೧೨ ರಂದು ಬಂಟ್ವಾಳದ ಡಾ. ಲಕ್ಷ್ಮಿನಾರಾಯಣ ಆಳ್ವರು ಮಾತನಾಡುತ್ತಾ ನಮ್ಮ ಸಂಸ್ಕೃತಿಯಲ್ಲಿ ರಾಮಾಯಣ ಹಾಸುಹೊಕ್ಕಾಗಿದೆ. ಅದನ್ನು ಎಲ್ಲರೂ ಅರಿತಿದ್ದಾರೆ ಮತ್ತು ಅದರ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

 

ಕಾರ್ಕಳದ ಶ್ರೀ ಗುಣವಂತೇಷ್ವರ ಭಟ್ ಇವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಮ ಸಂಸ್ಕೃತಿಯನ್ನು ಉಳಿಸಲು ಸಂಸ್ಕೃತವನ್ನು ಉಳಿಸಬೇಕೆಂದು ಕರೆ ನೀಡಿದರು. ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀ ವೈ.ವಿ. ಭಟ್ ಅವರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಅಭಿನಂದಿಸಿದರು. ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ನಿರ್ದೇಶಕರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎನ್ ಭಟ್ ಇವರು ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಗಂಗಾರತ್ನ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಉಪನ್ಯಾಸಕಿ ಶ್ರೀಮತಿ ಶರ್ಮಿಳಾ ಎಂ. ರಾವ್ ಇವರು ವಂದಿಸಿದರು. ಕಾರ್ಯಕ್ರಮವು ವಿದ್ಯಾರ್ಥಿಗಳ ವೇದ ಘೋಷ ಮತ್ತು ಪ್ರಾರ್ಥನೆಯೊಂದಿಗೆ ಆರಂಭವಾಯಿತು. ವೇದ-ವಿದ್ಯಾ ಸಂಸ್ಕಾರ ಸಂಶೋಧನ ಕೇಂದ್ರದ ಸಹ ನಿರ್ದೇಶಕರಾದ ಡಾ. ಈಶ್ವರ ಪ್ರಸಾದ ಎ ಇವರು ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಗೋಷ್ಠಿಯು ವಾಲ್ಮೀಕಿ ವಿರಚಿತ ಶ್ರೀಮದ್ರಾಮಾಯಣಂ ಎಂಬ ವಿಷಯದ ಕುರಿತು ಇದ್ದು ಈ ದಿನದ ಗೋಷ್ಠಿಯು ಡಾ. ಈಶ್ವರ ಪ್ರಸಾದ ಆಲಂಗಾರು ಇವರು ರಾಮಾಯಣದ ದೇಶ ಕಾಲ ಮತ್ತು ಗ್ರಂಥವನ್ನು ಸಂಕ್ಷಿಪ್ತವಾಗಿ ಪರಿಚಯಿಸುವುದರೊಂದಿಗೆ ಆರಂಭವಾಯಿತು. ಆನಂತರ ಡಾ. ಪ್ರಭಾಕರ ಜೋಷಿ ಇವರು ರಾಮಾಯಣ ಪರಂಪರೆಯ ಕುರಿತು ಮಾತನಾಡಿದರು. ದ್ವಿತೀಯ ದಿನದ ಗೋಷ್ಠಿಯಲ್ಲಿ ಶ್ರೀ ಗೋಪಾಲ ಕೃಷ್ಣ ಶಾಸ್ತ್ರಿ ಮೂಡಂಬೈಲು ಇವರು ವಾಲ್ಮೀಕಿ ಚಿತ್ರಿಸಿದ ಸೀತಾರಾಮರು ವಿಷಯದ ಕುರಿತಾಗಿ ವಿವರಿಸಿದರು. ಡಾ. ಎನ್.ರಾಧಾಕೃಷ್ಣ ಭಟ್ ಮೈಸೂರು ಇವರು ಶ್ರೀಮದ್ರಾಮಾಯಣ ನಿರೂಪಿತ ಶಾಶ್ವತ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿದರು.

Highslide for Wordpress Plugin