ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಗಸು ಎನ್ನುವಂತೇ ಪ್ರಾಚೀನ ವೇದ ವಿದ್ಯೆ ಹಾಗೂ ಆಧುನಿಕ ಉದ್ಯೋಗ ಶಿಕ್ಷಣಗಳನ್ನು ಜೊತೆಜೊತೆಯಾಗಿ ಕಲಿಸಿದರೆ ಇಂದಿನ ಶಿಕ್ಷಣ ಪದ್ದತಿಯಲ್ಲಿಯ ನ್ಯೂನತೆ ನಿವಾರಣೆಯಾಗುವುದಲ್ಲದೇ ಸ್ವಸ್ಥ ಸಮಾಜ ನಿರ್ಮಾಣ ಸಾದ್ಯವಾಗುತ್ತದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದ್ದಾರೆ.
ಶ್ರೀಗಳು ಶ್ರೀ ಭಾರತೀ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಶ್ರೀ ವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನ ಕೇಂದ್ರವನ್ನು ಉದ್ಘಾಟಿಸಿ ಆಶೀರ್ವಾದ ಮಾಡಿದರು.
ಇಂದಿನ ಶಿಕ್ಷಣ ಅನ್ನ ವಸತಿಗಾಗಿ ಸಂಪಾದಿಸಲು ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿದೆ. ಅದು ಗುಣಮಟ್ಟದ ಕೊರತೆಯಿಂದ ಯಶಸ್ವಿಯಾಗುತ್ತಿಲ್ಲ; ಕಾರಣ ಬದುಕುವುದು ಹೇಗೆ? ಯಾಕೇ? ಎಂಬುದನ್ನು ಕಲಿಸುತ್ತಿಲ್ಲ. ಅದೇ ಪ್ರಾಚೀನ ಪರಂಪರೆಯ ವೇದ ಶಿಕ್ಷಣ ಜೀವಿಸುವ ವಿಧಾನ ಹಾಗೂ ಗುರಿಯನ್ನು ಭೋದಿಸುವುದಲ್ಲದೆ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಶ್ರಮಿಸುತ್ತಿತ್ತು. ಇಂದಿನ ಜನಾಂಗಕ್ಕೆ ಇವೆರಡರ ಸಾಮರಸ್ಯದ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಕವಿ ಕಾಳಿದಾಸ ಹೇಳಿದಂತೆ ‘ಹಳೆತೆಲ್ಲವೂ ಒಳ್ಳೆಯದಲ್ಲ ಹೊಸತೆಲ್ಲವೂ ತಿರಸ್ಕಾರಾರ್ಹವಲ್ಲ’. ಪರಿಶೀಲಿಸಿ, ಪರೀಕ್ಷಿಸಿ ಇವೆರಡನ್ನೂ ಸಮೀಕರಿಸಿ ಸ್ವೀಕರಿಸಲು ವೇದ ವಿದ್ಯಾ ಸಂಸ್ಕಾರ ಮತ್ತು ಸಂಶೋಧನ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ವಿದ್ವಾನ್ ಹಿರಣ್ಯ ವೆಂಕಟೇಶ ಭಟ್ಟರು ವೇದಾಧ್ಯಯನದ ಅವಶ್ಯಕತೆಯ ಕುರಿತು ಉಪನ್ಯಾಸ ಮಾಡುತ್ತಾ ಜಾತಿ ಮತ ಭೇದವಿಲ್ಲದೆ ಅರ್ಹತೆಯ ಆಧಾರದ ಮೇರೆಗೆ ವೇದಾಧ್ಯಯನಕ್ಕೆ ಅವಕಾಶವಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎನ್ ಭಟ್ಟರು ಸಂಶೋಧನ ಕೇಂದ್ರದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಪ್ರಾರಂಭದಲ್ಲಿ ಅಧ್ಯಕ್ಷ ಶ್ರೀ ಕೆ.ಎಸ್. ಭಟ್ಟರು ಸ್ವಾಗತಿಸಿದರು. ಶ್ರೀ ಭಾರತೀ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀಪತಿ ರಾವ್ ನಿರೂಪಿಸಿ ವಂದಿಸಿದರು.