ಕಾರ್ಗಿಲ್ ವಿಜಯ ದಿವಸ 2018-19
ನಂತೂರು, ಜು.26 : ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗುರುವಾರ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು.
ಇಂಡಿಯನ್ ಏರ್ಫೋರ್ಸ್ನ ನಿವೃತ್ತ ಸಾರ್ಜೆಂಟ್ ಶ್ರೀಪ್ರಕಾಶ್ ಕುಕ್ಕಿಲ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅನಂತರ ಸೇನೆಯ ವಿವಿಧ ಹುದ್ದೆಗಳಿಗೆ ಸೇರುವ ನಿರ್ಧಾರ ಮಾಡಬೇಕು. ಸೈನಿಕ ಕುಟುಂಬಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳು ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ ಎಂದು ಸೈನ್ಯಕ್ಕೆ ಸೇರುವ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಸಹಿತ ವಿವರಿಸಿದರು.
ಇದೇ ಸಂದರ್ಭದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರು ಮಧ್ಯ ಹವ್ಯಕ ವಲಯಾಧ್ಯಕ್ಷ ರಮೇಶ್ ಭಟ್ ಸರವು ಅವರು ಮಾತನಾಡಿ, ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾರ್ಯಾಲಯ ಕಾರ್ಯದರ್ಶಿ ಎಂ.ಟಿ.ಭಟ್ ಅವರು ಮಾತನಾಡಿ, ಹುತಾತ್ಮರನ್ನು ಸ್ಮರಿಸುವುದು ನಮ್ಮ ಕರ್ತವ್ಯ. ಆದರೆ ಅದು ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಎ. ಮತ್ತು ಪ.ಪೂ. ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು.
ಹೋಬಳಿ ಮಟ್ಟದ ಪ್ರತಿಭಾ ಕಾರಂಜಿಯ ನಾಟಕ ಸ್ಪರ್ಧೆ ಮತ್ತು ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಪದವಿ ಕಾಲೇಜಿನ ವಿದ್ಯಾರ್ಥಿನಿ ಜಾಹ್ನವಿ ಸ್ವಾಗತಿಸಿ, ಪ್ರೌಢಶಾಲೆಯ ವಿದ್ಯಾರ್ಥಿನಿ ಪಲ್ಲವಿ ವಂದಿಸಿದರು. ಪ.ಪೂ. ಕಾಲೇಜಿನ ವಿದ್ಯಾರ್ಥಿ ಧನುಷ್ ಕಾರ್ಯಕ್ರಮ ನಿರ್ವಹಿಸಿದರು.