ನಂತೂರು ಭಾರತೀ ಸಮೂಹ ಸಂಸ್ಥೆ : ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವರ್ಧಂತ್ಯುತ್ಸವ
ನಂತೂರು, ಜು.31 : ಮಂಗಳೂರಿನ ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ವರ್ಧಂತ್ಯುತ್ಸವವನ್ನು ಸೋಮವಾರ ಆಚರಿಸಲಾಯಿತು.
ಶ್ರೀ ಗುರುವಂದನೆ ಬಳಿಕ ಪ್ರಾರಂಭವಾದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಅವರು,ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಇದೀಗ ೨೫ನೇ ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದಾರೆ. ಗೋವುಗಳ ಸಂರಕ್ಷಣೆಗಾಗಿ ವಿಶೇಷ ಕಾಳಜಿ ಹೊತ್ತರಿವು ಅವರ ಸಮಗ್ರ ಯೋಜನೆಗಳನ್ನು ರೂಪಿಸಿದ್ದಾರೆ. ಸಿದ್ಧಾಪುರ ತಾಲೂಕಿನ ಭಾನ್ಕುಳಿ ಶ್ರೀ ರಾಮದೇವ ಮಠದಲ್ಲಿ ಗೋಸ್ವರ್ಗ ನಿರ್ಮಾಣ ಮಾಡುವುದರ ಮೂಲಕ ೧೦೦೦ ಗೋವುಗಳ ಸಂರಕ್ಷಣೆಯ ಮಹತ್ತರ ಕಾರ್ಯವನ್ನು ಕೈಗೊಂಡಿದ್ದಾರೆ. ಗೋವುಗಳು ನಮ್ಮ ತಾಯಿಯಂತೆ. ನಾವೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸೋಣ ಎಂದರು.
ಶ್ರೀ ಭಾರತೀ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಈಶ್ವರಪ್ರಸಾದ್ ಅವರು ಮಾತನಾಡಿ, ವಿದ್ಯಾರ್ಥಿಗಳು ಭಾರತೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಹಾಗೂ ಭಾರತೀಯ ಗೋತಳಿಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ ಎನ್ನುವ ಶ್ರೀಗುರುಗಳ ಆಶಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಸ್ಥೆಯ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡರು.