ಮಂಗಳೂರು ನಂತೂರಿನ
ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ ಸಭಾಭವನದಲ್ಲಿ ದಿನಾಂಕ 6-11-2021ರಂದು ಗೋಪೂಜೆ, ಗೋಉತ್ಪನ್ನಗಳ ಪ್ರಾತ್ಯಕ್ಷಿಕೆ ಮತ್ತು ಭೂಮಿಪೂಜೆ ನೆರವೇರಿತು.
ಈ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶ್ರೀ ಮಧುಸೂದನ ಭಟ್ ಸೊಂದಿ ಅವರು ಗೋವಿನ ಮಹತ್ವವನ್ನು ವಿವರಿಸಿದರು.
ಸೇವಾ ಸಮಿತಿಯ ಸದಸ್ಯ ಶ್ರೀ ರಮೇಶ್ ಭಟ್ ಸರವು ಅವರು ಗೋಪೂಜೆ ಮತ್ತು ಭೂಮಿಪೂಜೆಯ ಬಗ್ಗೆ ಸಂಕಲ್ಪವನ್ನು ಬೋಧಿಸಿದರು.
ಸೇವಾ ಸಮಿತಿಯ ಕೋಶಾಧಿಕಾರಿಗಳಾದ ಶ್ರೀ ಉದಯಶಂಕರ ನೀರ್ಪಾಜೆ ಅವರು ಗೋಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ನಂತರ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾರ್ತಿಕ್ ಗೋಪೂಜೆ ನೆರವೇರಿಸಿದರು. ವಿದ್ಯಾರ್ಥಿಗಳು ನಂದಿನಿ, ಭಾರತೀ ಮತ್ತು ಶಬಲಾ ಎಂಬ, ಸಂಸ್ಥೆಯ ದೇಸೀ ಗೋವುಗಳಿಗೆ ಪುಷ್ಪಾರ್ಚನೆ ಮಾಡಿ, ಗೋಗ್ರಾಸ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜೀವನ್ದಾಸ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ, ಗೋಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಶ್ರೀ ಸತೀಶ್ ಶಾಸ್ತ್ರಿ, ಸ್ವಾಮಿ ಸದಾನಂದ ಸರಸ್ವತಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಹಾಗೂ ಶ್ರೀ ಭಾರತೀ ಪದವಿ ಪೂರ್ವ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬೋಧಕ, ಬೋಧಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಗೋಪೂಜೆಯಲ್ಲಿ ಪಾಲ್ಗೊಂಡರು.



